ಬೆಳಗಾವಿ: 'ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ವಿಷಯದ ಬಗ್ಗೆ ಮಾತನಾಡದಂತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ನೋಟಿಸ್ ಕೊಟ್ಟಿದ್ದು ನನಗೆ ಗೊತ್ತಿಲ್ಲ. ಯಾರು ಈ ವದಂತಿ ಹಬ್ಬಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಪ್ರಶ್ನಿಸಿದರು.
ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
'ಯಾವ ಸಚಿವರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಬಿಜೆಪಿ ಪ್ರಾಯೋಜಿತ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸ ಇಡಬೇಡಿ' ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಕೆಪಿಸಿಸಿ ಅಧ್ಯಕ್ಷರು ಬದಲಾವಣೆ ಆಗುತ್ತಿದ್ದರೆ, ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಮಾವೇಶದ ಸಿದ್ಧತೆ ಪರಿಶೀಲನೆಗಾಗಿ ಇಂದು ಇಲ್ಲಿಗೆ ಏಕೆ ಬರುತ್ತಿದ್ದರು' ಎಂದು ಪ್ರಶ್ನಿಸಿದರು.
'ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಮಾತ್ರ ಅಪಮಾನ ಮಾಡಿಲ್ಲ. ಅಂಬೇಡ್ಕರ್ ತತ್ವಗಳನ್ನು ನಂಬುವವರ ಅಪಹಾಸ್ಯ ಮಾಡಿದ್ದಾರೆ. ಇದನ್ನು ವಿರೋಧಿಸಿ ಬೆಳಗಾವಿಯಲ್ಲಿ ಜ.21ರಂದು 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಸಮಾವೇಶ, ಜ.27ರಂದು ಅಂಬೇಡ್ಕರ್ ಜನ್ಮಸ್ಥಳವಿರುವ ಮಧ್ಯಪ್ರದೇಶದಲ್ಲಿ ಸಮಾವೇಶ ಮಾಡಲಿದ್ದೇವೆ' ಎಂದು ಹೇಳಿದರು.
'ಒಂದೆಡೆ ಅಂಬೇಡ್ಕರ್ ಅಪಮಾನ ಮಾಡುತ್ತಿರುವ ಬಿಜೆಪಿಯವರು, ಮತ್ತೊಂದೆಡೆ ಪರಿಶಿಷ್ಟರು, ಹಿಂದುಳಿದ ಸಮುದಾಯದವರು, ಮಹಿಳೆಯರು, ಯುವಕರ ಅಧಿಕಾರ ಕಸಿದುಕೊಳ್ಳುತ್ತಿದ್ದಾರೆ. ಹಾಗಾಗಿ ದೇಶದಾದ್ಯಂತ ಇಂದು ಹೊಸ ಕ್ರಾಂತಿ ಮಾಡುವ ಅವಶ್ಯಕತೆ ಇದೆ. ಬೆಳಗಾವಿಯಿಂದ ಹೊರಹೊಮ್ಮುವ ಧ್ವನಿ ದೇಶದ ರಾಜಕಾರಣಕ್ಕೆ ಹೊಸ ದಿಸೆ ನೀಡಲಿದೆ. 100 ವರ್ಷಗಳ ಹಿಂದೆ ಇಲ್ಲಿ ಅಧಿವೇಶನ ನಡೆದಾಗ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಈಗ 100 ವರ್ಷಗಳ ನಂತರ ನಡೆಯುತ್ತಿರುವ ಕಾರ್ಯಕ್ರಮ ಸಂವಿಧಾನದ ಮೇಲಿನ ದಾಳಿ ವಿರುದ್ಧ ಹೊಸ ಕ್ರಾಂತಿಗೆ ಸೂತ್ರವಾಗಲಿದೆ. ಬೆಳಗಾವಿಯ ಸಮಾವೇಶ ಐತಿಹಾಸಿಕವಾಗಲಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.