ADVERTISEMENT

ರೌಡಿ ಪಟ್ಟಿಗೆ ಸೇರಿಸದಂತೆ ಲಂಚ: ಹೆಡ್ ಕಾನ್ ಸ್ಟೆಬಲ್, ಮಧ್ಯವರ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 16:58 IST
Last Updated 16 ಫೆಬ್ರುವರಿ 2023, 16:58 IST
   

ಬೆಂಗಳೂರು: ಪ್ರಕಣವೊಂದರಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬರನ್ನು ರೌಡಿ ಪಟ್ಟಿಗೆ ಸೇರಿಸದೇ ಇರಲು ₹15,000 ಲಂಚ ಪಡೆದ ಹೊಸಕೋಟೆ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೆಬಲ್ ಮಂಜುನಾಥ್ ಕೆ.ಎನ್. ಮತ್ತು ಹಣ ಪಡೆದ ಖಾಸಗಿ ಮಧ್ಯವರ್ತಿ ಸುರೇಶ್ ಜಿ. ಎಂಬುವವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹೊಸಕೋಟೆ ನಿವಾಸಿ ಜಯರಾಮ್ ಕಾರ್ತಿಕ್ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅದರ ಆಧಾರದಲ್ಲಿ ಜಯರಾಮ್ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಲಾಗಿತ್ತು. ರೌಡಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ತಡೆಯಲು ₹15,000 ಲಂಚ‌ ನೀಡುವಂತೆ ಮಂಜುನಾಥ್ ಬೇಡಿಕೆ ಇಟ್ಟಿದ್ದರು. ಈ‌ ಕುರಿತು ಜಯರಾಮ್ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.

ಜಯರಾಮ್ ಗುರುವಾರ ಹೊಸಕೋಟೆ ಪೊಲೀಸ್ ಠಾಣೆಗೆ ಹೋಗಿದ್ದರು. ‌ಮಂಜುನಾಥ್ ಸೂಚನೆಯಂತೆ ಸುರೇಶ್ ಠಾಣೆಯ ಹೊರ ಭಾಗದಲ್ಲಿ ಬಂದು ಲಂಚದ ಹಣ ಪಡೆದುಕೊಂಡರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಮಂಜುನಾಥ್ ಮತ್ತು ಸುರೇಶ್ ಇಬ್ಬರನ್ನೂ ಬಂಧಿಸಿದರು ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಎಸ್ ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.