ADVERTISEMENT

ಕಡ್ಡಾಯ ಗ್ರಾಮೀಣ ಸೇವೆಗೆ ಒತ್ತಡ ಬೇಡ: ಹೈಕೋರ್ಟ್‌ ಮಧ್ಯಂತರ ಆದೇಶ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 20:29 IST
Last Updated 30 ಜೂನ್ 2021, 20:29 IST
   

ಬೆಂಗಳೂರು: ಕಡ್ಡಾಯ ಗ್ರಾಮೀಣ ಸೇವೆಯ ಅಧಿಸೂಚನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಒಂದು ತಂಡದ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಮುಂದಿನ ಎರಡು ವಾರಗಳವರೆಗೆ ಕಡ್ಡಾಯ ಗ್ರಾಮೀಣ ಸೇವೆಗೆ ಒತ್ತಡ ಹೇರದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ಉತ್ಸುಕರಾಗಿರುವ ಕಾರಣದಿಂದ ತಮಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡುವಂತೆ ಕೋರಿ ಈ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗ್ದುಮ್‌ ಅವರಿದ್ದ ಪೀಠ, ಮಧ್ಯಂತರ ಆದೇಶ ಹೊರಡಿಸಿತು.

‘ಅರ್ಜಿದಾರ ವಿದ್ಯಾರ್ಥಿಗಳಿಗೆ ಸೀಮಿತವಾಗಿ ಕಡ್ಡಾಯ ಗ್ರಾಮೀಣ ಸೇವೆಯ ಆದೇಶ ಪಾಲನೆಗೆ ಎರಡು ವಾರಗಳವರೆಗೆ ಸರ್ಕಾರ ಒತ್ತಡ ಹೇರಬಾರದು. ಉಳಿದಂತೆ ಅಧಿಸೂಚನೆಯ ಜಾರಿಯ ವಿಚಾರದಲ್ಲಿ ಸರ್ಕಾರವು ಸ್ವತಂತ್ರವಾಗಿದೆ’ ಎಂದು ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ADVERTISEMENT

ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದ್ದ ನ್ಯಾಯಾಲಯ, ಬುಧವಾರ ಮತ್ತೆ ಅರ್ಜಿಯ ವಿಚಾರಣೆ ನಡೆಸಿತು. ವಿದ್ಯಾರ್ಥಿಗಳು ಮತ್ತು ಸರ್ಕಾರದ ಪರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.

2021ರಲ್ಲಿ ಎಂಬಿಬಿಎಸ್‌ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆಗಾಗಿ ನೋಂದಣಿ ಮಾಡಿಕೊಳ್ಳುವಂತೆ ಜೂನ್‌ 8ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಜೂನ್‌ 30ರಿಂದಲೇ ಕಡ್ಡಾಯ ಗ್ರಾಮೀಣ ಸೇವೆ ಆರಂಭವಾಗಲಿದೆ ಎಂದು ಜೂನ್‌ 17ರಂದು ಮತ್ತೊಂದು ಅಧಿಸೂಚನೆ ಹೊರಡಿಸಲಾಗಿತ್ತು.

‘ಮ್ಯಾನೇಜ್‌ಮೆಂಟ್‌ ಕೋಟಾದಡಿ ಸೀಟು ಪಡೆದು ಎಂಬಿಬಿಎಸ್‌ ಪದವಿ ಪೂರೈಸಿದ ವಿದ್ಯಾರ್ಥಿಗಳನ್ನು ಕಡ್ಡಾಯ ಗ್ರಾಮೀಣ ಸೇವೆಯಿಂದ ಹೊರಗಿಟ್ಟು ಅಧಿಸೂಚನೆ ಹೊರಡಿಸಲಾಗಿದೆ. ಒಂದೇ ವರ್ಷದಲ್ಲಿ ಕಲಿತ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.