ADVERTISEMENT

ಭಾರತೀಯ ಸಂಸ್ಕೃತಿ ಅವಹೇಳನ ಮಾಡಿದರೆ ಸಹಿಸೋಲ್ಲವೆಂಬ ಸಂದೇಶ ರವಾನಿಸಿ

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 13:37 IST
Last Updated 6 ಸೆಪ್ಟೆಂಬರ್ 2019, 13:37 IST

ಬೆಳಗಾವಿ: ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅವಹೇಳನ ಮಾಡಿದರೆ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ನಾವು ಸ್ಪಷ್ಟವಾಗಿ ರವಾನಿಸಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಇಲ್ಲಿನ ಗುರುದೇವ ರಾನಡೆ ಮಂದಿರದಲ್ಲಿ ಶುಕ್ರವಾರ ‘ದಿ ಗ್ಲಿಂಪ್ಸಸ್ ಆಫ್ ಶ್ರೀಗುರುದೇವ ರಾನಡೆ’ ಇಂಗ್ಲಿಷ್‌ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹಿಂದಿನಿಂದಲೂ ಭಾರತೀಯರ ನಂಬಿಕೆ ಕುರಿತಂತೆ ಅನೇಕ ರೀತಿಯ ಆಘಾತಕಾರಿ ಚಟುವಟಿಕೆಗಳು ಕಂಡುಬರುತ್ತಿವೆ. ನಮ್ಮ ನಂಬಿಕೆ ಘಾಸಿಗೊಳಿಸುವ ಯತ್ನ ನಡೆಯುತ್ತಿದೆ. ನೀರನ್ನು H2o ಎಂದಷ್ಟೇ ಭಾವಿಸಿದವರು ನಾವಲ್ಲ. ಅದನ್ನು ಗಂಗೆ, ಯಮುನಾ, ತೀರ್ಥ ಎಂದು ಪವಿತ್ರ ಭಾವದಿಂದ ಕಂಡವರು. ಗೋವನ್ನು ಗೋಮಾತೆ ಎಂದು ಗೌರವಿಸುವವರು. ಭಗವದ್ಗೀತೆಯಲ್ಲಿ ಇಡೀ ಮನುಕುಲಕ್ಕೆ ಬೇಕಾದ ವಿಷಯಗಳನ್ನು ಹೇಳಲಾಗಿದೆ. ಹೀಗಿದ್ದರೂ ಕೆಲವರು ಸ್ವಾರ್ಥ ಸಾಧನೆಗಾಗಿ ನಮ್ಮ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಹಗುರವಾಗಿ ಮಾತನಾಡುತ್ತಿದ್ದಾರೆ. ‘ಇಸಂ’ಗಳ ಹೆಸರಿನಲ್ಲಿ ನಮ್ಮ ಸಂಸ್ಕೃತಿಯನ್ನು ಟೀಕಿಸುತ್ತಿದ್ದಾರೆ. ಇದು ಮುಂದುವರಿಯದಂತೆ ನೋಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ನಮ್ಮ ನಂಬಿಕೆಗಳನ್ನು ಪ್ರಶ್ನಿಸುವುದಿದ್ದರೆ ವೈಜ್ಞಾನಿಕ ವಿಧಾನದಲ್ಲಿ ಬರಬೇಕು. ಅದನ್ನು ಬಿಟ್ಟು ಅಗ್ಗದ ಪ್ರಚಾರಕ್ಕಾಗಿ ನಮ್ಮ ಶ್ರೀರಾಮ, ಭಗವದ್ಗೀತೆ ಬಗ್ಗೆ ಹಗುರವಾಗಿ ಮಾತನಾಡಿದರೆ, ಅವಹೇಳನ ಮಾಡಿದರೆ ಹಾಗೂ ಅಪನಂಬಿಕೆ ವ್ಯಕ್ತಪಡಿಸಿದರೆ ನಡೆಯುವುದಿಲ್ಲ ಎನ್ನುವ ಸಂದೇಶ ನೀಡಬೇಕು. ಹಾಗೆ ಮಾತನಾಡುವವರಿಗೆ ಪಾಪ ಬರುತ್ತದೆಂದು ಸುಮ್ಮನಾಗಬಾರದು. ಸನಾತನ ಸಂಸ್ಕೃತಿಯ ವಿಶೇಷಗಳು, ಸಾಧಕರ ಬಗ್ಗೆ ಹಗುರವಾಗಿ ಮಾತಾಡಿದರೆ ಸಹಿಸುವುದಿಲ್ಲ ಎಂದು ಜಾಗೃತರಾಗಬೇಕು. ಅದಕ್ಕೆ ತಕ್ಕಂತೆ ಮಾನಸಿಕ ಸ್ಥಿತಿ, ಶಕ್ತಿ ಹಾಗೂ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಪರಕೀಯರು ಆಳಿದ್ದರಿಂದಾಗಿ ನಾವಿನ್ನೂ ಗುಲಾಮಿತನದ ಮನಸ್ಥಿತಿಯಲ್ಲಿದ್ದೇವೆ. ಅದರಿಂದ ಹೊರಬರಬೇಕು. ನಮ್ಮತನ ತೋರಿಸುವ ಆಡಳಿತ ನಡೆಸುವ ಅವಕಾಶ ಇತ್ತೀಚೆಗೆ ಸಿಗುತ್ತಿದೆ. ಭಾರತವನ್ನು ಇಡೀ ಜಗತ್ತಿಗೇ ಗುರುವಿನ ಸ್ಥಾನದಲ್ಲಿ ಕಾಣುವಂತಹ ಶಕ್ತಿ ಪಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.