ADVERTISEMENT

ಒಂದೇ ಜಮೀನಿಗೆ 2 ಬಾರಿ ಪರಿಹಾರ: ಕೆಐಎಡಿಬಿ ಮತ್ತೊಬ್ಬ ಸಿಬ್ಬಂದಿ ED ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 20:04 IST
Last Updated 9 ಜುಲೈ 2025, 20:04 IST
ಇ.ಡಿ
ಇ.ಡಿ   

ಬೆಂಗಳೂರು: ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಎರಡು ಬಾರಿ ಪರಿಹಾರ ನೀಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ರವಿ ಕುರುಬೆಟ್ಟ ಎಂಬುವವರನ್ನು ವಶಕ್ಕೆ ಪಡೆದಿದೆ.

ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010–12 ರ ಅವಧಿಯಲ್ಲಿ ಮಂಡಳಿಯು ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ಒದಗಿಸಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, 2021–22ನೇ ಆರ್ಥಿಕ ವರ್ಷದಲ್ಲಿ ಹಲವು ಜಮೀನುಗಳಿಗೆ ಎರಡನೇ ಬಾರಿಗೆ ಒಟ್ಟು ₹19.99 ಕೋಟಿ ಪರಿಹಾರ ನೀಡಲಾಗಿತ್ತು. ಈ ಸಂಬಂಧ ಧಾರವಾಡದ ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿಯು, ಇದೇ ರೀತಿ ಒಟ್ಟು ₹72 ಕೋಟಿಯಷ್ಟು ಅಕ್ರಮ ಎಸಗಲಾಗಿದೆ ಎಂಬುದನ್ನು ಪತ್ತೆ ಮಾಡಿತ್ತು. ಅಕ್ರಮ ನಡೆದ ಅವಧಿಯಲ್ಲಿ ಕೆಐಎಡಿಬಿ ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿ ಆಗಿದ್ದ, ನಿವೃತ್ತ ಅಧಿಕಾರಿ ವಸಂತಕುಮಾರ್ ದುರ್ಗಪ್ಪ ಸಜ್ಜನ್‌ ಮತ್ತು ಭೂ ದಲ್ಲಾಳಿ ಮೈಬೂಬ್‌ ಅಲ್ಲಾಬಕ್ಷ್‌ ದುಂಡಾಸಿ ಅವರನ್ನು ಬಂಧಿಸಿತ್ತು.

ADVERTISEMENT

ವಸಂತಕುಮಾರ್ ಅವರ ಅಣತಿಯಂತೆ ಮಂಡಳಿಯ ಸಿಬ್ಬಂದಿ ರವಿ ಕುರುಬೆಟ್ಟ ದಾಖಲೆಗಳನ್ನು ತಿದ್ದಿದ್ದರು. ಅವರ ವಿರುದ್ಧ ಧಾರವಾಡದ ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅವರು ಅಕ್ರಮ ಎಸಗಿರುವ ಬಗ್ಗೆ ಪುರಾವೆಗಳು ದೊರೆತಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಶೀಘ್ರವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.