ADVERTISEMENT

ಡಬ್ಬಲ್‌ ಎಂಜಿನ್‌ ಸರ್ಕಾರದಿಂದ ಮಹಾಮೋಸ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 16:55 IST
Last Updated 8 ಫೆಬ್ರುವರಿ 2023, 16:55 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ತೆರಿಗೆ ಸಂಗ್ರಹದಲ್ಲಿ ಕರ್ನಾಟಕವನ್ನು ತನ್ನ ಎಟಿಎಂ ಯಂತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿಯ ಡಬ್ಬಲ್‌ ಎಂಜಿನ್‌ ಸರ್ಕಾರ, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಮಹಾಮೋಸ ಮಾಡಿರುವುದು ಬಯಲಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯ ಮುಖಪುಟದಲ್ಲಿ ‘ವಿಶೇಷ ಅನುದಾನ: ರಾಜ್ಯಕ್ಕೆ ಸೊನ್ನೆ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವಿಶೇಷ ವರದಿಯ ತುಣುಕಿನೊಂದಿಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಚುನಾವಣೆ ವರ್ಷದಲ್ಲಿ ತಿಂಗಳಿಗೆ ನಾಲ್ಕು ಬಾರಿ ರಾಜ್ಯಕ್ಕೆ ಬರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕನ್ನಡಿಗರನ್ನು ಎಷ್ಟು ಕೀಳಾಗಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಸಾಕ್ಷಿ’ ಎಂದಿದ್ದಾರೆ.

‘ತೆರಿಗೆ ಕಟ್ಟಲು ದಕ್ಷಿಣ ಭಾರತ, ಅನುದಾನ ಹಂಚಿಕೆಗೆ ಉತ್ತರ ಭಾರತ ಎಂಬುದು ಇವರ ರಾಜನೀತಿ. ಐದು ವರ್ಷಗಳ ಅವಧಿಯಲ್ಲಿ ಉತ್ತರ ಮತ್ತು ದಕ್ಷಿಣದ ರಾಜ್ಯಗಳಿಗೆ ನೀಡಿದ ಅನುದಾನದ ಅಂಕಿಅಂಶಗಳನ್ನು ಲೋಕಸಭೆಯಲ್ಲಿ ಮಂಡಿಸಿದ ಸಚಿವರಿಗೆ ಕೊಂಚವೂ ಲಜ್ಜೆ ಎನಿಸಲಿಲ್ಲವೆ? ಕನ್ನಡಿಗರು ಬಿಜೆಪಿಯವರಿಗೆ ತಬ್ಬಲಿ ಮಕ್ಕಳೇ ಆಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ವಿಶೇಷ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಸೊನ್ನೆ ಸುತ್ತಿರುವುದು ಹೇಯ. 25 ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ ಇಂಥ ದುರ್ಗತಿಯೆ? ಮೋದಿಯವರೇ ತಿಂಗಳಿಗೆ ಹತ್ತು ಸಲ ಬೇಕಿದ್ದರೂ ರಾಜ್ಯಕ್ಕೆ ಬನ್ನಿ. ಅನುದಾನ ಹಂಚಿಕೆಯಲ್ಲಿ ಕನ್ನಡಿಗರಿಗೆ ಮಾಡಿರುವ ಅನ್ಯಾಯಕ್ಕೆ ಕಾರಣ ಹೇಳಿ’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.