ADVERTISEMENT

ಗಲಭೆ ವಿಡಿಯೊ ನಕಲಿ: ಈಶ್ವರ ಖಂಡ್ರೆ ಸಂಶಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 19:45 IST
Last Updated 25 ಡಿಸೆಂಬರ್ 2019, 19:45 IST
   

ಮಡಿಕೇರಿ: ‘ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೊಗಳು ನಕಲಿಯೇ ಅಥವಾ ಸೃಷ್ಟಿಯೇ ಎಂಬ ಸಂಶಯ ಮೂಡಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇಲ್ಲಿ ಬುಧವಾರ ಹೇಳಿದರು.

ಈ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆದು ಸತ್ಯ ಹೊರಬರಲಿ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪ್ರಚೋದನೆ, ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಏನಿದ್ದರೂ ಬಿಜೆಪಿ ಮುಖಂಡರದ್ದು. ಕೇಂದ್ರ ಸಚಿವ ಸುರೇಶ್ ಅಂಗಡಿ ಹಾಗೂ ಸಚಿವ ಸಿ.ಟಿ.ರವಿ ಅವರ ಹೇಳಿಕೆಗಳನ್ನು ಗಮನಿಸಿದರೆ ಕುಮ್ಮಕ್ಕು ನೀಡುತ್ತಿರುವುದು ಯಾರು ಎಂಬುದು ತಿಳಿಯುತ್ತದೆ. ಸಂವಿಧಾನ ಉಳಿಸಲು ಕಾಂಗ್ರೆಸ್‌ ಶಾಂತಿಯುತ ಹೋರಾಟ ನಡೆಸುತ್ತಿದೆ’ ಎಂದು ಹೇಳಿದರು.

ADVERTISEMENT

‘ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದು ಖಂಡನೀಯ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಮುಖಂಡರು, ಮುಗ್ಧ ಹೆಣಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂವಿಧಾನ ಉಳಿಸಿ, ಭಾರತ ರಕ್ಷಿಸಿ’ ಘೋಷಣೆ ಅಡಿ ಇದೇ 28ರಂದು ಬೆಂಗಳೂರಿನಲ್ಲಿ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ರ್‍ಯಾಲಿಯು ಕಾಂಗ್ರೆಸ್‌ ಕಚೇರಿಯಿಂದ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.