ಬೆಂಗಳೂರು: ’ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಕೌಶಲಮಟ್ಟಕ್ಕೆ ಹೊಂದಿಕೊಳ್ಳುವ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಆನ್‍ಲೈನ್ ಪೋರ್ಟಲ್ ಆರಂಭಿಸಲಾಗುವುದು. ಇದರಲ್ಲಿ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಮಾಹಿತಿ ಸುಲಭವಾಗಿ ಸಿಗಲಿದೆ' ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಮಂಗಳವಾರ ಆಯೋಜಿಸಿದ್ದ ಫೇಸ್‍ಬುಕ್ ಲೈವ್‍ನಲ್ಲಿ ಅವರು ಮಾತನಾಡಿದರು.
'ರಾಜ್ಯದ ಉನ್ನತ ಶಿಕ್ಷಣ ಕೋರ್ಸ್‌ಗಳ ಪರೀಕ್ಷೆ ಹಾಗೂ ತರಗತಿಗಳ ಆರಂಭ ಕುರಿತು ಜೂನ್ ಮೊದಲ ವಾರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು' ಎಂದು ತಿಳಿಸಿದರು.
'ಈ ತಿಂಗಳೊಳಗೆ ಪಠ್ಯಕ್ರಮ ಪೂರ್ಣಗೊಳ್ಳಬೇಕು. ಬಹುತೇಕ ಪದವಿ ಕಾಲೇಜುಗಳಲ್ಲಿ ಶೇ 80ರಷ್ಟು ಪಠ್ಯಕ್ರಮ ಪೂರ್ಣಗೊಂಡಿದೆ. ಈಗ ನಡೆಯುತ್ತಿರುವ ಆನ್‍ಲೈನ್ ತರಗತಿಗಳ ಮೂಲಕ ಬಾಕಿ ಇರುವ ಪಠ್ಯಕ್ರಮ ಪೂರೈಸಿಕೊಳ್ಳುವುದರ ಕಡೆಗೆ ವಿದ್ಯಾರ್ಥಿಗಳ ಗಮನ ಕೇಂದ್ರೀಕೃತವಾಗಿರಲಿ' ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಂದ 'ಪ್ರಮೋಟ್ ವಿಟಿಯು' ಅಭಿಯಾನ: ಸಚಿವರ ಫೇಸ್‍ಬುಕ್ ಲೈವ್ ವೇಳೆ 'ಪ್ರಮೋಟ್ ವಿಟಿಯು' ಎಂಬ ಘೋಷವಾಕ್ಯ ಹೆಚ್ಚು ಸದ್ದು ಮಾಡಿತು. ಯಾವುದೇ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವಿದ್ಯಾರ್ಥಿಗಳು ಫೇಸ್‍ಬುಕ್‍ನಲ್ಲಿ ಸಚಿವರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.