ADVERTISEMENT

‘ಪ್ರಚಾರಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಟೀಕೆ’–ಡಾ.ಎಚ್‌.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:36 IST
Last Updated 27 ಸೆಪ್ಟೆಂಬರ್ 2021, 16:36 IST
ಡಾ.ಎಚ್.ಸಿ.ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ   

ಬೆಂಗಳೂರು: ಜೆಡಿಎಸ್‌ ನಾಯಕರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಪ್ರಚಾರ ಪಡೆಯುವ ಉದ್ದೇಶದಿಂದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ. ಅದೊಂದೇ ಅವರಿಗೆ ಉಳಿದಿರುವ ದಾರಿ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

‘ಜೆಡಿಎಸ್‌ ಮುಗಿಸಲು ಸಿದ್ದರಾಮಯ್ಯ ಅವರಿಂದ ಸಾಧ್ಯವಿಲ್ಲ’ ಎಂಬ ದೇವೇಗೌಡರ ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಅವರು, ‘ಚುನಾವಣೆ ಸಮೀಪಿಸುತ್ತಿದ್ದಂತೆಯೇ ದೇವೇಗೌಡರು ಭಾವನಾತ್ಮಕ ವಿಚಾರಗಳ ಪ್ರಸ್ತಾಪ ಹಾಗೂ ಸಿದ್ದರಾಮಯ್ಯ ವಿರುದ್ಧದ ಟೀಕೆಗಳ ಮೊರೆ ಹೋಗಿದ್ದಾರೆ. ಭಾವನಾತ್ಮಕ ವಿಚಾರಗಳ ಮೇಲೂ ಚುನಾವಣಾ ಪ್ರಣಾಳಿಕೆಗಳನ್ನು ರೂಪಿಸಬಹುದು ಎಂಬುದನ್ನು ಜೆಡಿಎಸ್‌ ನಾಯಕರು ತೋರಿಸಿಕೊಟ್ಟಿದ್ದಾರೆ’ ಎಂದು ಟೀಕಿಸಿದ್ದಾರೆ.

ಕೆಲವು ದಿನಗಳಿಂದ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಈಗ ದೇವೇಗೌಡರೂ ಅದೇ ಹಾದಿ ಹಿಡಿದಿದ್ದಾರೆ. ಇದು ಜೆಡಿಎಸ್‌ನ ಸಾಂಪ್ರದಾಯಿಕ ತಂತ್ರದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಅವರನ್ನು ಅರ್ಥವಿಲ್ಲದೇ ಟೀಕಿಸುವ ಮೂಲಕ ಜನರ ಕರುಣೆ ಗಿಟ್ಟಿಸುವ ದುರ್ಬಲ ಅಭಿವ್ಯಕ್ತಿಯನ್ನು ಜೆಡಿಎಸ್‌ ನಾಯಕರು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಕಳೆದ ಚುನಾವಣೆಯಲ್ಲಿ ದೈಹಿಕ ಅನಾರೋಗ್ಯದ ವಿಚಾರಗಳನ್ನೂ ಜೆಡಿಎಸ್‌ ನಾಯಕರು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಈ ಬಾರಿ ಸಿದ್ದರಾಮಯ್ಯ ಅವರನ್ನು ಟೀಕಿಸುವುದೊಂದೇ ಅವರಿಗೆ ಇರುವ ದಾರಿ ಅನಿಸುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.