ADVERTISEMENT

ಕೋವಿಡ್ ಸ್ಥಿತಿಗತಿ | ಕೇಂದ್ರ ಆರೋಗ್ಯ ಸಚಿವರ ಜೊತೆ ಡಾ.ಕೆ.ಸುಧಾಕರ್ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಮೇ 2020, 13:26 IST
Last Updated 8 ಮೇ 2020, 13:26 IST
   

ಬೆಂಗಳೂರು: ಲಾಕ್‌ಡೌನ್ ಸಡಲಿಕೆ ಮತ್ತು ವಿದೇಶಗಳಲ್ಲಿರುವ ಕನ್ನಡಿಗರು ಹಿಂದಿರುಗಿದ ನಂತರ ಎದುರಾಗುವ ಸವಾಲುಗಳನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ವಿಡಿಯೊ ಸಂವಾದದಲ್ಲಿ ರಾಜ್ಯದ ಪರವಾಗಿ ಡಾ.ಸುಧಾಕರ್ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಮುಂದಿನ ದಿನಗಳಲ್ಲೂ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಟಾಸ್ಕ್ ಫೋರ್ಸ್ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಕೈಗೊಳ್ಳಬೇಕಿರುವ ಕ್ರಮಗಳನ್ನು ನಿರ್ಧರಿಸಲಾಗಿದೆ ಎಂದು ಡಾ. ಸುಧಾಕರ್ ಕೇಂದ್ರ ಸಚಿವರಿಗೆ ವಿವರಿಸಿದರು.

ADVERTISEMENT

ಈ ಹಿಂದೆ ತಿಳಿಸಿದ್ದಂತೆ ತಂತ್ರಜ್ಞಾನ ಮತ್ತು ತಜ್ಞರ ಹೊಂದಾಣಿಕೆಯ ಮೂಲಕ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 4ಟಿ ಸೂತ್ರ ಯಶಸ್ವಿಯಾಗಿದೆ. ಆದರೆ ಮರಣ ಪ್ರಮಾಣವನ್ನು ಕಡಿಮೆಗೊಳಿಸುವ ಯತ್ನಗಳ ನಡುವೆಯೂ ಮೂವತ್ತು ಮಂದಿ ಸಾವನ್ನಪ್ಪಿರುವುದು ದುರದೃಷ್ಟಕರ ಎಂದು ಸುಧಾಕರ್ ಹೇಳಿದರು.

ಟೆಲಿ ಮೆಡಿಸಿನ್ ಮತ್ತು ಟೆಲಿ ಐಸಿಯು ನಂತಹ ಪರಿಣಾಮಕಾರಿ ಕ್ರಮಗಳ ಮೂಲಕ ಕರ್ನಾಟಕದಲ್ಲಿ ಉನ್ನತ ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ. ಆರಂಭದಲ್ಲಿ ಎರಡು ಲ್ಯಾಬ್ ಗಳಿಂದ ಕೇವಲ ಮುನ್ನೂರು ಟೆಸ್ಟ್ ಗಳನ್ನು ಮಾತ್ರವೇ ಮಾಡಲು ಸಾಧ್ಯವಾಗಿತ್ತು. ಆದರೆ ಈಗ ಲ್ಯಾಬ್ ಗಳ ಸಂಖ್ಯೆ ಮೂವತ್ತೆರಡು ಹಾಗೂ ಪ್ರತಿ ದಿನ ಐದು ಸಾವಿರದ ಐನೂರು ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಬೆಂಗಳೂರಿನ ಖಾಸಗಿ ಸಂಸ್ಥೆ ಆವರಣದಲ್ಲಿ ಅಳವಡಿಸಿರುವ ಎರಡು ಟೆಸ್ಟ್ ಮಿಷನ್ ಗಳನ್ನು ನಮ್ಮ ಬಳಕೆಗೆ ಸಿಗುವಂತೆ ಐಸಿಎಂಆರ್ ಅಗತ್ಯ ಸೂಚನೆ ನೀಡಿದರೆ ದಿನವೊಂದಕ್ಕೆ ಹೆಚ್ಚುವರಿಯಾಗಿ ಆರೂವರೆ ಸಾವಿರ ಟೆಸ್ಟ್ ಮಾಡಲು ಅವಕಾಶವಾಗುತ್ತದೆ. ಈ ಕುರಿತು ಸಚಿವಾಲಯದಿಂದ ಅಗತ್ಯ ಸೂಚನೆ ರವಾನೆ ಆಗಬೇಕು ಎಂದು ಇದೇ ಸಮಯದಲ್ಲಿ ಡಾ.ಸುಧಾಕರ್ ಕೋರಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ಐಸಿಎಂಆರ್ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳೀಯವಾಗಿಯೇ ಆ ಯಂತ್ರಗಳ ಬಳಕೆಗೆ ಅವಕಾಶ ನೀಡಲು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಹಾಗೆಯೇ, ಟೆಸ್ಟ್ ಸಂಖ್ಯೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಕಿಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿಕೊಡುವಂತೆ ಸಚಿವ ಸುಧಾಕರ್ ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಟೆಸ್ಟಿಂಗ್ ಕಿಟ್ ಕಳುಹಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿದಿನವೂ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದಾರೆ. ‘ಆರೋಗ್ಯ ಸೇತು ಆ್ಯಪ್’ ಜೊತೆಗೆ ಆಪ್ತಮಿತ್ರ ಸಹಾಯವಾಣಿಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗಿದೆ. ಈ ಎರಡು ಹೆಚ್ಚು ಉಪಯುಕ್ತವಾಗುತ್ತದೆ. ಲಾಕ್ ಡೌನ್ ಸಡಲಿಕೆ ನಂತರ ಎದುರಾಗಬಹುದಾದ ಪರಿಸ್ಥಿತಿ ನಿಭಾಯಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರದ ಸೂಚನೆಯಂತೆ ವಿದೇಶದಿಂದ ಆಗಮಿಸುವ ಆರು ಸಾವಿರದ ಐನೂರು ಪ್ರಯಾಣಿಕರನ್ನು ಬರಮಾಡಿಕೊಂಡು, ಕೇಂದ್ರ ನೀಡಿರುವ ಮಾರ್ಗಸೂಚಿ ಪ್ರಕಾರವೇ ತಪಾಸಣೆ ಮತ್ತು ಕ್ವಾರಂಟೈನ್ ಗೆ ಬಲಪಡಿಸಲಾಗುವುದು ಎಂದು ಡಾ.ಸುಧಾಕರ್ ಕೇಂದ್ರ ಸಚಿವರಿಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ನಗರ ಮತ್ತು ಮೈಸೂರು ಜಿಲ್ಲೆ ಅಧಿಕಾರಿಗಳ ಜೊತೆ ಕೂಡ ಕೇಂದ್ರ ಸಚಿವರು ಮಾತನಾಡಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.