ADVERTISEMENT

ಬಿಯರ್ ಬದಲು ವಿಸ್ಕಿ ಕುಡಿಸಿ, ಮದ್ಯದಂಗಡಿ ಮಾಲೀಕರಿಗೆ ಅಬಕಾರಿ ಇಲಾಖೆ ಒತ್ತಡ!

ವಿಜಯಕುಮಾರ್ ಎಸ್.ಕೆ.
Published 27 ಜನವರಿ 2020, 4:28 IST
Last Updated 27 ಜನವರಿ 2020, 4:28 IST
ಬಿಯರ್ ಬದಲು ವಿಸ್ಕಿ ಕುಡಿಸುವಂತೆ ಅಬಕಾರಿ ಇಲಾಖೆಯ ಒತ್ತಡ
ಬಿಯರ್ ಬದಲು ವಿಸ್ಕಿ ಕುಡಿಸುವಂತೆ ಅಬಕಾರಿ ಇಲಾಖೆಯ ಒತ್ತಡ    

ಬೆಂಗಳೂರು: ಬಿಯರ್ ಬದಲು ವಿಸ್ಕಿ, ರಮ್ ಕುಡಿಸಿ–ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಅಂಗಡಿ ಮಾಲೀಕರಿಗೆ ಈ ರೀತಿಒತ್ತಡ ಹೇರುತ್ತಿದ್ದಾರೆ.

ಬೆಂಗಳೂರಿನ ನೈಟ್‌ಲೈಫ್ ಅವಧಿ ರಾತ್ರಿ 11ರಿಂದ 1 ಗಂಟೆಯವರೆಗೆ ವಿಸ್ತರಣೆಯಾದ ಬಳಿಕ ಬಿಯರ್ ಮಾರಾಟ ಹೆಚ್ಚಳವಾಗಿತ್ತು. ವರ್ಷಕ್ಕೆ ಸರಾಸರಿ ಶೇ 4ರಿಂದ ಶೇ 8ರಷ್ಟು ಹೆಚ್ಚಳ ಕಾಣುತ್ತಿದ್ದ ಬಿಯರ್ ಮಾರಾಟದ ಪ್ರಮಾಣ ಹಿಂದಿನ ಎರಡು ವರ್ಷಗಳಲ್ಲಿ ಶೇ 12ರಿಂದ ಶೇ 20ರಷ್ಟು ಏರಿಕೆ ಕಂಡಿತ್ತು.

ಬಿಯರ್ ಮಾರಾಟ ಹೆಚ್ಚುವುದರಿಂದ ಅಬಕಾರಿ ಇಲಾಖೆಯ ವರಮಾನದಲ್ಲಿ ಗಣನೀಯ ಬದಲಾವಣೆಯೇನೂ ಆಗುವುದಿಲ್ಲ.ಅದರ ಬದಲು ಐಎಂಎಲ್‌ (ಭಾರತದಲ್ಲೇ ತಯಾರಿಸಿದ ಮದ್ಯ) ಮಾರಾಟ ಹೆಚ್ಚಳವಾದರೆ ವರಮಾನ ಹರಿದು ಬರುತ್ತದೆ. ಏಕೆಂದರೆ, ಮದ್ಯದ ದರಕ್ಕೆ ಹೋಲಿಸಿದರೆ ಬಿಯರ್ ದರ ಮೂರು–ನಾಲ್ಕು ಪಟ್ಟು ಕಡಿಮೆ. ಸುಂಕದ ರೂಪದಲ್ಲಿ ಇಲಾಖೆಗೆ ಬರುವ ವರಮಾನವೂ ಕಡಿಮೆ.

ADVERTISEMENT

ಹೀಗಾಗಿ, ಬಿಯರ್ ಬೇಡಿಕೆ ಕಡಿಮೆ ಮಾಡಲು ಸರ್ಕಾರ ‌2019–20ನೇ ಸಾಲಿನ ಬಜೆಟ್‌ನಲ್ಲಿ ಬಿಯರ್ ಮೇಲಿನ ಸುಂಕವನ್ನು ಶೇ 25ರಷ್ಟು ಹೆಚ್ಚಳ ಮಾಡಿದೆ. ಅಲ್ಲದೇ, ಕಳೆದ ವರ್ಷಕ್ಕಿಂತ ₹1,250 ಕೋಟಿ ಹೆಚ್ಚಿಗೆ ವರಮಾನ ಸಂಗ್ರಹಿಸುವ ಗುರಿ ನಿಗದಿಪಡಿಸಿದೆ.

‘ಬೆಂಗಳೂರಿನ ಕೆಲವೆಡೆ ಬಿಯರ್‌ಗೆ ಹೆಚ್ಚು ಬೇಡಿಕೆ ಇದೆ. ಐ.ಟಿ ಕಂಪನಿಗಳು, ಕಾಲೇಜುಗಳು ಜಾಸ್ತಿ ಇರುವ ಪ್ರದೇಶಗಳಲ್ಲಿನ ಮದ್ಯದ ಅಂಗಡಿಗಳಲ್ಲಿ ಬಿಯರ್‌ ಖರೀದಿಸುವವರೇ ಹೆಚ್ಚಿದ್ದಾರೆ. ದಿನಕ್ಕೆ 20 ಬಾಕ್ಸ್ ಬಿಯರ್, 10 ಬಾಕ್ಸ್ ಐಎಂಎಲ್‌ಗೆ ಬೇಡಿಕೆ ಸಲ್ಲಿಸಿದರೆ 10 ಬಾಕ್ಸ್‌ ಮಾತ್ರ ಬಿಯರ್‌ ಪೂರೈಸಿ, 20 ಬಾಕ್ಸ್ ಐಎಂಎಲ್ ನೀಡಲಾಗುತ್ತಿದೆ. ಬಿಯರ್ ಕೇಳುವ ಗ್ರಾಹಕರಿಗೆ ಮದ್ಯ ನೀಡಲು ಹೇಗೆ ಸಾಧ್ಯ’ ಎಂಬುದು ಮದ್ಯದ ಅಂಗಡಿ ಮಾಲೀಕರ ಪ್ರಶ್ನೆ.

‘ಈ ಕಾರಣದಿಂದಲೇ ಪ್ರಸಕ್ತ ಸಾಲಿನಲ್ಲಿ ಬಿಯರ್ ಮಾರಾಟ ಶೇ 30ರಷ್ಟು ಕಡಿಮೆಯಾಗಿದೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳೇ ಕಾರಣ’ ಎಂದು ಮದ್ಯದಂಗಡಿ ಮಾಲೀಕರೊಬ್ಬರು ದೂರುತ್ತಾರೆ.

‘ಐಎಂಎಲ್‌ ಮಾರಾಟಕ್ಕೆ ಒತ್ತಡ ಹೇರುತ್ತಿಲ್ಲ. ಬೇಸಿಗೆಯಲ್ಲಿ ಬಿಯರ್ ಮಾರಾಟ ಹೆಚ್ಚಾಗಲಿದೆ’ ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಐಎಂಎಲ್ ಮಾರಾಟಕ್ಕೆ ಮೇಲಧಿಕಾರಿಗಳಿಂದ ಒತ್ತಡ ಇರುವುದನ್ನು ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.