ADVERTISEMENT

ಕುಡಿಯುವ ನೀರು ಪೂರೈಕೆ: ಅಲ್ಪಾವಧಿ ಟೆಂಡರ್‌ಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 11:00 IST
Last Updated 24 ಏಪ್ರಿಲ್ 2019, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿರುವುದರಿಂದ ತುರ್ತಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಕಾರ್ಯಪಡೆಗಳನ್ನು ರಚಿಸಿ ಅನುದಾನ ಒದಗಿಸಲಾಗಿದೆ. ಈ ಕಾರ್ಯಪಡೆಗಳು ಸಮರೋಪಾದಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಂಡು ಅನುಷ್ಠಾನ ಮಾಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಬುಧವಾರ ಇಲ್ಲಿ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿದ ಅವರು, ‘ಮತದಾನದ ನಂತರ ಅವಶ್ಯ ಕಾಮಗಾರಿಗಳಿಗೆ ಟೆಂಡರ್‌ ಕರೆದು ಕಾರ್ಯಾದೇಶ ನೀಡಲು ಹಾಗೂ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ಹೀಗಾಗಿ, ತುರ್ತಾಗಿ ಅಲ್ಪಾವಧಿ ಟೆಂಡರ್‌ಗಳನ್ನು ಕರೆದು ಕುಡಿಯುವ ನೀರಿನ ಕಾಮಗಾರಿಗಳನ್ನು ಆರಂಭಿಸಬೇಕು’ ಎಂದು ನಿರ್ದೇಶನ ನೀಡಿದರು.

‘ರಾಜ್ಯದ 160 ತಾಲ್ಲೂಕುಗಳು ಬರಪೀಡಿತವಾಗಿವೆ. ಇಲ್ಲಿ ತುರ್ತಾಗಿ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

ADVERTISEMENT

ಬತ್ತಿ ಹೋದ ಕೊಳವೆಬಾವಿಗಳ ಸಾಮಗ್ರಿಗಳನ್ನು ಶೇಖರಿಸಿ ಹೊಸ ಕೊಳವೆಬಾವಿಗಳಿಗೆ ಬೇಕಾಗುವ ಪಂಪ್‌ಸೆಟ್, ಜಿಐ ಪೈಪ್‌ ಹಾಗೂ ಕೇಬಲ್‌ಗಳನ್ನು ಕಡ್ಡಾಯವಾಗಿ ಉಪಯೋಗಿಸಲು ಸೂಚಿಸಲಾಗಿದೆ. ಈ ಮೂಲಕ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುತ್ತಿದೆ. ಇದರಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.