ADVERTISEMENT

ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ!

ನಿರ್ಬಂಧ ಜಾರಿ ವೈಫಲ್ಯ; ಆಯುಕ್ತರ ಅಸಹಾಯಕತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:41 IST
Last Updated 6 ಜುಲೈ 2018, 19:41 IST
ಶಾಲೆಯ ಆವರಣದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು (ಸಂಗ್ರಹ ಚಿತ್ರ)
ಶಾಲೆಯ ಆವರಣದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು (ಸಂಗ್ರಹ ಚಿತ್ರ)   

ಬೆಂಗಳೂರು: ಶಾಲಾ– ಕಾಲೇಜುಗಳ ಪಕ್ಕದಲ್ಲಿ ಮದ್ಯ, ತಂಬಾಕು, ಬೀಡಿ– ಸಿಗರೇಟುಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದೆ.

ಆದರೆ, ಸರ್ಕಾರದ ಇನ್ನೊಂದು ನಿಯಮ ಅದಕ್ಕೆ ಅವಕಾಶ ನೀಡಿದೆ. ಹೀಗಾಗಿ, ನಿಷೇಧಿತ ವಸ್ತುಗಳ ಬಿಕರಿ ನಿರ್ಭೀತಿಯಿಂದ ನಡೆಯುತ್ತಿವೆ!

‘2016 ಕ್ಕೂ ಮೊದಲು ಆರಂಭಿಸಿದ್ದ ಮದ್ಯ, ಬೀಡಿ– ಸಿಗರೇಟು ಮತ್ತು ತಂಬಾಕು ಅಂಗಡಿಗಳನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಆ ಬಳಿಕ ಆರಂಭವಾಗಿರುವ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ವಿಧಾನಮಂಡಲ ಶಾಸನ ರಚನಾ ಸಮಿತಿಗೆಅಬಕಾರಿ ಆಯುಕ್ತರು ಭರವಸೆ ನೀಡಿದ್ದಾರೆ.

ADVERTISEMENT

ಶುಕ್ರವಾರ ಶಾಸನ ರಚನಾ ಸಮಿತಿ ವರದಿ ವಿಧಾನಸಭೆಯಲ್ಲಿ ಮಂಡಿಸಲಾಯಿತು.

‘ರಾಜ್ಯದಲ್ಲಿ 2016 ರ ಜುಲೈ 1 ಕ್ಕೆ ಮೊದಲು ಎಷ್ಟು ಬಾರ್‌ಗಳಿದ್ದವು? ಪುರಾತನ ದೇವಸ್ಥಾನಗಳು ಇದ್ದ ಕಾಲದಿಂದಲೂ ಅವುಗಳ ಸಮೀಪದಲ್ಲಿ ಮದ್ಯದಂಗಡಿಗಳು ಇದ್ದವೆ ಅಥವಾ ದೇವಸ್ಥಾನಗಳ ನಿರ್ಮಾಣ ಆದ ಬಳಿಕ ಮದ್ಯದಂಗಡಿಗಳು ಬಂದವೆ ಎಂಬ ಮಾಹಿತಿ ನೀಡಬೇಕು’ ಎಂದು ಸಮಿತಿ ಸೂಚಿಸಿದೆ.

‘ಶಾಲಾ– ಕಾಲೇಜುಗಳ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಮದ್ಯಪಾನ ಮುಕ್ತ, ತಂಬಾಕು ಮುಕ್ತವೆಂದು ಫಲಕಗಳನ್ನು ಹಾಕಿದ್ದರೂ ನಿರಾತಂಕವಾಗಿ ಮಾರಾಟ ಆಗುತ್ತಿವೆ’ ಎಂದು ಸಮಿತಿ ಅಬಕಾರಿ ಆಯುಕ್ತರ ಗಮನಕ್ಕೆ ತಂದಿತು.

‘ಇಂತಹ ಅಂಗಡಿಗಳಿಗೆ ಪರವಾನಗಿ ನೀಡಬಾರದು ಎಂಬ ನಿಯಮವೂ ಇದೆ. ಆದರೂ ಪರವಾನಗಿ ನೀಡಲಾಗಿದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ’ ಎನ್ನುವ ಪ್ರಶ್ನೆಗೆ, ‘ಅಬಕಾರಿ ನಿಯಮ–5 ರಲ್ಲಿ ವಿನಾಯ್ತಿ ನೀಡಿರುವುದರಿಂದ ಇಲಾಖೆ ಏನೂ ಮಾಡಲು ಸಾಧ್ಯವಾಗದು’ ಎಂದು ಆಯುಕ್ತರು ತಿಳಿಸಿದರು.

ಶಾಲಾ– ಕಾಲೇಜು, ಆಸ್ಪತ್ರೆ, ದೇವಸ್ಥಾನ, ಸರ್ಕಾರಿ ಕಚೇರಿಗಳು ಇರುವ ಪ್ರದೇಶದಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಬಾರದು ಎಂಬ ನಿಯಮವೇನೊ ಇದೆ. ಆದರೆ ಅದರ ಪಾಲನೆ ಮಾಡಲು ಸಾಧ್ಯವಾಗಿಲ್ಲ ಎಂದೂ ಹೇಳಿದ್ದಾರೆ.

ಕಳೆದ 25– 30 ವರ್ಷಗಳಲ್ಲಿ ಮದ್ಯದ ಅಂಗಡಿಗಳ ಹತ್ತಿರ ಶಾಲೆ– ಕಾಲೇಜು, ದೇವಸ್ಥಾನ, ಮಸೀದಿಗಳು ನಿರ್ಮಾಣಗೊಂಡಿವೆ. ಪದೇ ಪದೇ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವುದು ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮ 5 ಕ್ಕೆ ತಿದ್ದುಪಡಿ ತರಲಾಗಿತ್ತು.

**

ಒಬ್ಬ ವ್ಯಕ್ತಿ ಎಷ್ಟು ಮದ್ಯ ಇಟ್ಟುಕೊಳ್ಳಬಹುದು?

ಒಬ್ಬ ವ್ಯಕ್ತಿ ತನ್ನ ಬಳಿ ಗರಿಷ್ಠ 2.3 ಲೀಟರ್‌ ಮದ್ಯವನ್ನು ಇಟ್ಟುಕೊಳ್ಳಬಹುದು. ಈ ಹಿಂದೆ ಆ ಪ್ರಮಾಣ 4.16 ಲೀಟರ್‌ ಇತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದಿನ ಆದೇಶವನ್ನು ದುರುಪಯೋಗಪಡಿಸಿಕೊಂಡು ದಿನಸಿ/ಕಿರಾಣಿ ಅಂಗಡಿ, ಟೀ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿತ್ತು.

ಈ ಪ್ರವೃತ್ತಿಗೆ ಕಡಿವಾಣ ಹಾಕಲು ‘ಕರ್ನಾಟಕ ಅಬಕಾರಿ ನಿಯಮ’ 21 ಕ್ಕೆ ತಿದ್ದುಪಡಿ ಮಾಡಿರುವ ಅಧಿಸೂಚನೆಗೆ ಶಾಸನ ರಚನಾ ಸಮಿತಿ ಒಪ್ಪಿಗೆ ನೀಡಿದೆ.

ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದರು. ಇದನ್ನು ತಡೆಯುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಅಬಕಾರಿ ಆಯುಕ್ತರು ಸಮಿತಿಗೆ ತಿಳಿಸಿದರು.

**

ವೈನ್‌ ಬ್ರಾಂಡ್‌ ಲೇಬಲ್‌ ಅನುಮೋದನಾ ಶುಲ್ಕ ಇಳಿಕೆ

* ವಿಶೇಷ ಸನ್ನದು ಶುಲ್ಕ ₹1000 ದಿಂದ₹10,000 ಕ್ಕೆ ಏರಿಕೆ

* ಕ್ಯಾಂಟೀನ್‌ಗಳಲ್ಲಿ ತಪಾಸಣೆಗೆ ಎಸ್‌ಐಗಿಂತ ಮೇಲಿನ ಅಧಿಕಾರಿಗಳಿಗೆ ಅಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.