ADVERTISEMENT

ಬರ: ಎಚ್ಚೆತ್ತ ಮೈತ್ರಿ ಸರ್ಕಾರ

ಕಂದಾಯ ವಿಭಾಗಕ್ಕೆ ಒಂದರಂತೆ ಸಚಿವರ ತಂಡ: ಪರಿಹಾರ ಕಾರ್ಯಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 19:27 IST
Last Updated 23 ನವೆಂಬರ್ 2018, 19:27 IST
   

ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳ ಜನರ ನೋವಿಗೆ ಸ್ಪಂದಿಸಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಕೊನೆಗೂ ಮುಂದಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿದೆ.

ರಾಜಕೀಯ ಗೊಂದಲ ಹಾಗೂ ಉಪಚುನಾವಣೆಯ ಗುಂಗಿನಲ್ಲಿ ಬರ ಸಮಸ್ಯೆಯನ್ನು ಸರ್ಕಾರ ಮರೆತಿದೆ ಎಂದು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ವಿರೋಧ ಪಕ್ಷ ಬಿಜೆಪಿ ಆರೋಪ ಮಾಡಿತ್ತು. ಬರ ಪರಿಸ್ಥಿತಿ ಕುರಿತು ‘ಪ್ರಜಾವಾಣಿ’ ‘ಬರ ಮರೆತ ಸರ್ಕಾರ’ ಎಂಬ ಶೀರ್ಷಿಕೆಯಡಿ ಸವಿಸ್ತಾರ ವರದಿ ಪ್ರಕಟಿಸಿತ್ತು.

‘ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರತಿಯೊಂದು ಕಂದಾಯ ವಿಭಾಗಕ್ಕೆ ಅನ್ವಯವಾಗುವಂತೆ ಹಿರಿಯ ಸಚಿವರನ್ನು ಒಳಗೊಂಡ ನಾಲ್ಕು ಸಚಿವ ಸಂಪುಟ ಉಪಸಮಿತಿಗಳನ್ನು ರಚಿಸಲಾಗುತ್ತದೆ. ಈ ಸಮಿತಿಗೆ ಪ್ರಧಾನ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿಯೊಬ್ಬರನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಿಸಲಾಗುತ್ತದೆ. ಈ ಸಮಿತಿ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಅಧಿಕಾರಿಗಳು ಹಾಗೂ ಅಲ್ಲಿನ ಜನರ ಜತೆಗೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಡಳಿತಕ್ಕೆ ಸಲಹೆ ನೀಡಲಿದೆ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ADVERTISEMENT

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ’ ಎಂದರು.

ಹೊರ ರಾಜ್ಯಕ್ಕೆ ಮೇವು ಸಾಗಣೆ ನಿಷೇಧ

ಅಂತರರಾಜ್ಯ ಮೇವು ಸಾಗಣೆಯನ್ನು ನಿಷೇಧಿಸಿ ಕಂದಾಯ ಇಲಾಖೆ ಶುಕ್ರವಾರ ಆದೇಶಿಸಿದೆ. ಈ ನಿಷೇಧ 2019ರ ಮೇ 31ರ ವರೆಗೆ ಜಾರಿಯಲ್ಲಿರಲಿದೆ.

‘ಬರಪೀಡಿತ ಪ್ರದೇಶಗಳಲ್ಲಿ ಮೇವಿನ ಸಮಸ್ಯೆ ತೀವ್ರವಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರಕ್ಕೆ ಮೇವು ಸಾಗಣೆ ಮಾಡಲಾಗುತ್ತಿದೆ. ಮೇವು ಸಾಗಣೆ ನಿಷೇಧಿಸಲಾಗಿದೆ. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಲೋಪವೆಸಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ದೇಶಪಾಂಡೆ ತಿಳಿಸಿದರು.

ಸೂಚನೆಗಳೇನು?

*ಗುಳೆ ತಡೆಯುವ ಉದ್ದೇಶದಿಂದ ನರೇಗಾ ಯೋಜನೆಯಡಿ ಕೆಲಸಗಳನ್ನು ರೂಪಿಸಿ ಉದ್ಯೋಗ ಸೃಷ್ಟಿಸಬೇಕು.

*ಬರಪೀಡಿತ ತಾಲ್ಲೂಕುಗಳ ಉದ್ಯೋಗ ದಿನಗಳನ್ನು ಅಗತ್ಯ ಇರುವ ಕಡೆಗಳಲ್ಲಿ 100ರಿಂದ 150ಕ್ಕೆ ಏರಿಸಬೇಕು.

*ಕುಡಿಯುವ ನೀರು ಪೂರೈಕೆಗೆ ಚ್ಯುತಿ ಬಾರದಂತೆ ಕ್ರಮ ಕೈಗೊಳ್ಳಬೇಕು. ನೀರಿನ ಗುಣಮಟ್ಟದ ಕುರಿತು ನಿರಂತರ ನಿಗಾ ವಹಿಸಬೇಕು.

*ಜಿಲ್ಲಾಧಿಕಾರಿಗಳು ರೈತರ, ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ನೆರವು ನೀಡಬೇಕು.

*ಗೋಶಾಲೆ ಹಾಗೂ ಮೇವು ಸಂಗ್ರಹ ಕೇಂದ್ರಗಳನ್ನು ತೆರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.