
ಬೆಂಗಳೂರು: ‘ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಔಷಧ ಪೂರೈಕೆ ಟೆಂಡರ್ ನೀಡುವಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಹಲವು ಏಜೆನ್ಸಿಗಳು ಕಡಿಮೆ ದರಕ್ಕೆ ಪೂರೈಕೆ ಮಾಡುತ್ತಿರುವ ಔಷಧಗಳನ್ನೇ ಹಲವು ಪಟ್ಟು ಹೆಚ್ಚು ದರಕ್ಕೆ ಪೂರೈಸಲು ಗುತ್ತಿಗೆ ನೀಡಲಾಗಿದೆ’ ಎಂದರು.
‘ಜಿಲ್ಲಾಸ್ಪತ್ರೆಗೆ ಈಗ ಮೋಕ್ಷಿ ಪ್ಲಾಕ್ಸಾಕ್ಸಿನ್ ಎಂಬ ಕಣ್ಣಿನ ದ್ರಾವಣವನ್ನು ಪ್ರತಿ ಬಾಟಲ್‌ಗೆ ₹10.75ರಂತೆ ಪೂರೈಕೆ ಮಾಡಲಾಗುತ್ತಿದೆ. ಅದೇ ದ್ರಾವಣವನ್ನು ಪ್ರತಿ ಬಾಟಲ್‌ಗೆ ₹116ರಂತೆ ಪೂರೈಕೆ ಮಾಡಲು ಹೊಸದಾಗಿ ಗುತ್ತಿಗೆ ನೀಡಲಾಗಿದೆ. ₹4ಕ್ಕೆ ಪೂರೈಕೆ ಮಾಡುತ್ತಿರುವ ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ವಿಟಮಿನ್ ಡಿ3 ಮಾತ್ರೆಗಳನ್ನು ₹35.64ಕ್ಕೆ ಪೂರೈಸಲು ಗುತ್ತಿಗೆ ನೀಡಲಾಗಿದೆ’ ಎಂದು ವಿವರಿಸಿದರು.
‘ಈ ಆಸ್ಪತ್ರೆಯು ಈ ಹಿಂದೆ ಆರೋಗ್ಯ ಇಲಾಖೆಯ ಸುಪರ್ದಿಯಲ್ಲಿ ಇತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಈ ಬದಲಾವಣೆಯ ನಂತರವೇ ಹಲವು ಸಮಸ್ಯೆ ಎದುರಾಗಿದೆ. ಆಳುವವರ ಸಹಕಾರದೊಂದಿಗೇ ಔಷಧ ಖರೀದಿಯಲ್ಲಿ ಅಕ್ರಮ ನಡೆದಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಬಿಜೆಪಿ ರಾಜ್ಯ ವಕ್ತಾರ ಎಚ್.ವೆಂಕಟೇಶ್ ದೊಡ್ಡೇರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.