ADVERTISEMENT

ದೊಡ್ಡವರ ‘ಡ್ರಗ್ಸ್’ ನಶೆ: ನಟ–ನಟಿ, ನಿರೂಪಕ ಸಾಕ್ಷಿ

ಸಿಸಿಬಿ ವಿಚಾರಣೆ ಎದುರಿಸಿದ್ದ ದಿಗಂತ್, ಐಂದ್ರಿತಾ ರೇ, ಅಕುಲ್

ಸಂತೋಷ ಜಿಗಳಿಕೊಪ್ಪ
Published 3 ಸೆಪ್ಟೆಂಬರ್ 2021, 20:53 IST
Last Updated 3 ಸೆಪ್ಟೆಂಬರ್ 2021, 20:53 IST
ಐಂದ್ರಿತಾ ರೇ ಮತ್ತು ದಿಗಂತ್
ಐಂದ್ರಿತಾ ರೇ ಮತ್ತು ದಿಗಂತ್   

ಬೆಂಗಳೂರು: ತಮ್ಮದೇ ವ್ಯವಸ್ಥಿತ ಜಾಲ ರೂಪಿಸಿಕೊಂಡು ನಗರದ ಹಲವೆಡೆ ಡ್ರಗ್ಸ್ ಪಾರ್ಟಿಗಳನ್ನು ಆಯೋಜಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ 25 ಆರೋಪಿಗಳ ಕೃತ್ಯಕ್ಕೆ, ಸಿನಿಮಾ ನಟ–ನಟಿ, ಕಾರ್ಯಕ್ರಮ ನಿರೂಪಕ, ನಿರ್ದೇಶಕ ಹಾಗೂ ಹಲವರು ಸಾಕ್ಷಿ ಆಗಿದ್ದಾರೆ.

ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಸಿಬಿ ಪೊಲೀಸರು, ಡ್ರಗ್ಸ್ ಮಾರಾಟ ಹಾಗೂ ಸೇವನೆಯನ್ನು ಕಣ್ಣಾರೆ ಕಂಡಿರುವ ಸಾಕ್ಷಿದಾರರ ವಿವರವನ್ನೂ ದಾಖಲಿಸಿದ್ದಾರೆ.

‘ನಟ ದಿಗಂತ್ ಹಾಗೂ ಅವರಪತ್ನಿ, ನಟಿ ಐಂದ್ರಿತಾ ರೇ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಕಾರ್ಯಕ್ರಮ ನಿರೂಪಕ ಅಕುಲ್ ಬಾಲಾಜಿ, ರೂಪದರ್ಶಿ ರಮೇಶ್ ಡೆಂಬ್ಲಾ ಸೇರಿದಂತೆ ಹಲವರ ಹೆಸರು ಸಾಕ್ಷಿದಾರರ ಪಟ್ಟಿಯಲ್ಲಿದೆ. ಅವರೆಲ್ಲರೂ ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164ರಡಿ ಈಗಾಗಲೇ ಹೇಳಿಕೆ ದಾಖಲಿಸಿ ದ್ದಾರೆ’ ಎಂಬುದಾಗಿ ಸಿಸಿಬಿ ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

ADVERTISEMENT

'ಪ್ರಕರಣದ ಆರೋಪಿಗಳು, 2016ರಿಂದಲೇ ಪಾರ್ಟಿಗ ಳನ್ನು ಆಯೋಜಿಸುತ್ತಿದ್ದರು. ಆರಂಭದಲ್ಲಿ ಮದ್ಯ ಹಾಗೂ ಮೋಜಿಗಷ್ಟೇ ಪಾರ್ಟಿಸೀಮಿತವಾಗಿತ್ತು. ಕ್ರಮೇಣ, ಗಾಂಜಾಸೇವನೆ ಹಾಗೂ ಮಾರಾಟ ಶುರುವಾಯಿತು. ನೈಜೀರಿಯಾ ಪ್ರಜೆಗಳ ಒಡನಾಟ ಆಗುತ್ತಿದ್ದಂತೆ ಕೊಕೇನ್ ಹಾಗೂಎಂಡಿಎಂಎ ಮಾತ್ರೆಗಳ ವ್ಯವಹಾರವೂ ಆರಂಭವಾಗಿತ್ತು. ಇಂಥ ಕೆಲ ಪಾರ್ಟಿಗಳಲ್ಲಿ ಸಾಕ್ಷಿದಾರರು ಪಾಲ್ಗೊಂಡಿದ್ದರು’ ಎಂಬ ಅಂಶವೂ ಪಟ್ಟಿಯಲ್ಲಿದೆ.

‘ಪ್ರಕರಣದ 10ನೇ ಆರೋಪಿ ಅಭಿಸ್ವಾಮಿ ಅಲಿಯಾಸ್ ಅಭಿಜಿತ್ ರಂಗಸ್ವಾಮಿ, ನೆಲಮಂಗಲ ರಸ್ತೆಯಲ್ಲಿರುವ ತನ್ನ ಮನೆಯಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದ. ಆಪ್ತರೊಬ್ಬರ ಆಹ್ವಾನದಂತೆ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು’ ಎಂಬ ಮಾಹಿತಿಯನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಪಾರ್ಟಿಗೆ ಮುನ್ನವೇ ಆರೋಪಿ ಅಭಿಸ್ವಾಮಿ, ಮತ್ತೊಬ್ಬ ಆರೋಪಿ ಬಿ.ಕೆ. ರವಿಶಂಕರ್‌ನಿಂದ ಕೊಕೇನ್ ಪುಡಿ ಹಾಗೂ ಎಕ್‌ಸ್ಟೆಸಿ ಮಾತ್ರೆಗಳನ್ನು ಖರೀದಿಸಿಟ್ಟುಕೊಂಡಿದ್ದ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಿಗೆ ಅವುಗಳನ್ನು ಮಾರಿದ್ದ. ಕೆಲವರು ಡ್ರಗ್ಸ್ ಸೇವನೆ ಮಾಡಿದ್ದರೆಂದು ಸಾಕ್ಷಿದಾರರು ಹೇಳಿಕೆಯಲ್ಲಿ ವಿವರಿಸಿದ್ದಾರೆ’ ಎಂಬ ಅಂಶವೂ ಪಟ್ಟಿಯಲ್ಲಿದೆ.

‘2019ರ ಅಕ್ಟೋಬರ್ 9ರಂದು ನ್ಯೂ ಬಿಇಎಲ್ ರಸ್ತೆಯಲ್ಲಿರುವ ‘ಹಾಫ್ ವೇ ಹೌಸ್’ ರೆಸ್ಟೋರೆಂಟ್‌ನಲ್ಲಿ ನಟಿ ಸಂಜನಾ ಗಲ್ರಾನಿ ಹುಟ್ಟುಹಬ್ಬದ ಪಾರ್ಟಿಇತ್ತು. ಸಾಕ್ಷಿದಾರ ರಮೇಶ ಡೆಂಬ್ಲಾ ಪಾಲ್ಗೊಂಡಿದ್ದರು. ಅವರನ್ನು ಮಾತನಾಡಿಸಿದ್ದ ಸಂಜನಾ, ಸ್ಟಫ್ (ಕೊಕೇನ್) ತೆಗೆದುಕೊಳ್ಳುತ್ತಿರಾ ? ಎಂದು ಕೇಳಿದ್ದರು. ‘ಬೇಡ’ ಎಂದಿದ್ದ ರಮೇಶ್, ಅಲ್ಲಿಂದ ಹೊರಟು ಹೋಗಿದ್ದರು. ಈ ಸಂಗತಿಯನ್ನೂ ಸಾಕ್ಷಿದಾರ ಹೇಳಿಕೆಯಲ್ಲಿ ವಿವರಿಸಿದ್ದಾರೆ’ ಎಂಬ ಮಾಹಿತಿಯೂ ಆರೋಪಪಟ್ಟಿಯಲ್ಲಿದೆ.

‘2019ರ ಏಪ್ರಿಲ್ 28 ಹಾಗೂ 29ರಂದು ಹೊಸೂರು ರಸ್ತೆಯಲ್ಲಿರುವ ‘ದವನಮ್ ಸರೋವರ್ ಪೋರ್ಟಿಕೊ’ ಹೋಟೆಲ್‌ನಲ್ಲಿ ಫ್ಯಾಷನ್ ಷೊ ಆಯೋಜಿಸಲಾಗಿತ್ತು. ರೂಪದರ್ಶಿಯಾಗಿ ರಮೇಶ್ ಡೆಂಬ್ಲಾ ಪಾಲ್ಗೊಂಡಿದ್ದರು. ನಟಿ ರಾಗಿಣಿ ದ್ವಿವೇದಿ ಹಾಗೂ ಬಿ.ಕೆ. ರವಿಶಂಕರ್ ಕೊಠಡಿಯಲ್ಲಿ ಕೊಕೇನ್ ಸೇವಿಸಿದ್ದನ್ನು ರಮೇಶ್ ನೋಡಿದ್ದಾರೆ’ ಎಂಬ ಅಂಶವನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ನ್ಯಾಯಾಲಯದಲ್ಲಿ ಸದ್ಯದಲ್ಲೇ ವಿಚಾರಣೆ ಆರಂಭ’
‘ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರ ತಂಡ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸದ್ಯದಲ್ಲೇ ವಿಚಾರಣೆ ಆರಂಭವಾಗಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣದ ಆರೋಪಿಗಳು ಕೆಲ ದಿನ ಜೈಲುವಾಸ ಅನುಭವಿಸಿದ್ದರು. ಸದ್ಯ ಅವರೆಲ್ ನ್ಯಾಯಾಲಯದ ಜಾಮೀನು ಮೇಲೆ ಹೊರಗಿದ್ದಾರೆ’ ಎಂದರು.

ಅಕುಲ್ ಬಾಲಾಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.