ADVERTISEMENT

ಡ್ರಗ್ಸ್ ಪ್ರಕರಣದಲ್ಲಿ ದೊಡ್ಡ ತಿಮಿಂಗಿಲಗಳು

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 19:39 IST
Last Updated 28 ಜನವರಿ 2021, 19:39 IST
   

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದ ವಿಚಾರಣೆಗಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ತಮ್ಮ ಕಚೇರಿಗೆ ಕರೆಸಿದ್ದ ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ, ಕೆಲ ಮಾಹಿತಿ ಪಡೆದು ವಾಪಸು ಕಳುಹಿಸಿದರು.

ಪ್ರಕರಣದ ಆರೋಪಿಯಾಗಿರುವ ನಟಿ ರಾಗಿಣಿ ದ್ವಿವೇದಿ, ಇತ್ತೀಚೆಗಷ್ಟೇ ಜಾಮೀನು ಮೇಲೆ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಡ್ರಗ್ಸ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತಷ್ಟು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ತನಿಖೆಗೆ ಅಗತ್ಯವಿರುವ ಮಾಹಿತಿ ಪಡೆಯಲೆಂದು ಇಂದ್ರಜಿತ್‌ ಲಂಕೇಶ್ ಅವರನ್ನು ಪೊಲೀಸ್ ಕಮಿಷನರ್ ಕಚೇರಿಗೆ ಗುರುವಾರ ಕರೆಸಿದ್ದ ಡಿಸಿಪಿ, ಕೆಲ ನಿಮಿಷ ವಿಚಾರಣೆಗೆ ಒಳಪಡಿಸಿದರು. ಮತ್ತೊಮ್ಮೆ ಕರೆಸುವುದಾಗಿ ಹೇಳಿ ಇಂದ್ರಜಿತ್ ಅವರನ್ನು ವಾಪಸು ಕಳುಹಿಸಿದರು.

ADVERTISEMENT

ಕಚೇರಿಯಿಂದ ಹೊರಬಂದು ಸುದ್ದಿಗಾರರ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ’ಡಿಸಿಪಿಯವರು ವಿಚಾರಣೆಗೆ ಬರುವಂತೆ ತಿಳಿಸಿದ್ದರು. ವಿಧಾನಸೌಧ ಭದ್ರತೆ ಜವಾಬ್ದಾರಿ ಡಿಸಿಪಿಯವರಿಗೆ ಇದ್ದಿದ್ದರಿಂದ, ಅವರು ಕಚೇರಿಯಿಂದ ಹೋದರು. ಮತ್ತೊಂದು ದಿನ ವಿಚಾರಣೆಗೆ ಬರುವಂತೆ ಹೇಳಿದರು’ ಎಂದರು.

‘ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ಸಣ್ಣ ಮೀನುಗಳನ್ನು ಮಾತ್ರ ಹಿಡಿದಿದ್ದಾರೆ. ದೊಡ್ಡ ತಿಮಿಂಗಿಲುಗಳು ಇದ್ದು, ಅವರನ್ನು ಹಿಡಿಯುವ ಕೆಲಸ‌ ಆಗಬೇಕು. ನಾನೂ ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದೇನೆ. ಪ್ರಕರಣದಲ್ಲಿ ಹಲವರು ಹೆಸರು ಹೊರ ಬಂದಿದೆ. ಕೆಲ ರಾಜಕಾರಣಿಗಳು ಮತ್ತು ವಿದೇಶಿ ಪ್ರಜೆಗಳೂ ಈ ಜಾಲದಲ್ಲಿದ್ದಾರೆ’ ಎಂದೂ ಅವರು ಆರೋಪಿಸಿದರು.

ನೈಜೀರಿಯಾ ಪ್ರಜೆ ಬಂಧನ: ₹ 25 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾ ಪ್ರಜೆ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ನೈಜೀರಿಯಾದ ಡಿಯೋ ಮ್ಯಾಂಡೆ ಹಾಗೂ ಕೇರಳದ ನಿಶಾನ್ ಬಂಧಿತರು. ಅವರಿಂದ ₹ 25 ಲಕ್ಷ ಮೌಲ್ಯದ 500 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಗರದಲ್ಲಿ ವ್ಯವಸ್ಥಿತವಾಗಿ ತಮ್ಮದೇ ಜಾಲ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಉಪ ಪೆಡ್ಲರ್‌ಗಳ ಮೂಲಕ ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದರು. ಕೆಲ ಕಾಲೇಜುಗಳು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳೇ ಇವರ ಗ್ರಾಹಕರಾಗಿದ್ದರು.’

‘ಯಲಹಂಕ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವೇಳೆ
ಯಲ್ಲೇ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ಪೊಲೀಸರು ತಿಳಿಸಿದರು.

‘ಹೊರ ರಾಜ್ಯಗಳಿಂದ ಆರೋಪಿಗಳು ಡ್ರಗ್ಸ್ ಖರೀದಿಸಿ ತರುತ್ತಿದ್ದರು. ಅದರ ಮಾರಾಟದಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.

₹35 ಲಕ್ಷ ಮೌಲ್ಯದ ಡ್ರಗ್ಸ್: ಸಿ.ಎ ವಿದ್ಯಾರ್ಥಿ ಬಂಧನ

ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ವಿಶ್ರುತ್ ಎನ್‌. ರಾಜ್ (27) ಎಂಬಾತನನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ನಿವಾಸಿಯಾದ ವಿಶ್ರುತ್, ಬಿ.ಕಾಂ ಪದವೀಧರ. ಲೆಕ್ಕ ಪರಿಶೋಧಕ (ಸಿ.ಎ) ಪರೀಕ್ಷೆ ಕಟ್ಟಿದ್ದ ಆತ, ಬೆಂಗಳೂರಿನ ಸಿ.ಎ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಲೇ ವ್ಯಾಸಂಗ ಮಾಡುತ್ತಿದ್ದ. ಚನ್ನಸಂದ್ರದ ದ್ವಾರಕನಗರ ಬಳಿ ವಾಸವಿದ್ದ’ ಎಂದು ಪೊಲೀಸರು ಹೇಳಿದರು.

‘ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆರೋಪಿ, ಡ್ರಗ್ಸ್ ಮಾರಾಟ ಮಾಡಲಾರಂಭಿಸಿದ್ದ. ಆಂಧ್ರಪ್ರದೇಶದಲ್ಲಿರುವ ಪರಿಚಯಸ್ಥರ ಮೂಲಕ ಡ್ರಗ್ಸ್ ಖರೀದಿಸಿ ತರುತ್ತಿದ್ದ. ಕೋರಮಂಗಲ, ಎಸ್‌.ಜಿ.ಪಾಳ್ಯ, ಎಚ್‌ಎಸ್‌ಆರ್ ಲೇಔಟ್, ಜಯನಗರ, ಜೆ.ಪಿ.ನಗರ ಸೇರಿದಂತೆ ಹಲವೆಡೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ’ ಎಂದೂ ತಿಳಿಸಿದರು.

‘ಆರೋಪಿ, ಪ್ರತಿ ಕೆ.ಜಿ ಹ್ಯಾಶಿಷ್‌ಗೆ ₹ 5 ಲಕ್ಷದಿಂದ ₹ 6 ಲಕ್ಷ ಕೊಟ್ಟು ಖರೀದಿಸುತ್ತಿದ್ದ. ಅದನ್ನೇ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ. ಡ್ರಗ್ಸ್ ಮಾರಾಟದಿಂದ ಬಂದ ಹಣದಲ್ಲಿ ಆರೋಪಿ, ಐಷಾರಾಮಿ ಜೀವನ ನಡೆಸುತ್ತಿದ್ದ. ಆತನಿಂದ ₹ 35 ಲಕ್ಷ ಮೌಲ್ಯದ ಹ್ಯಾಶಿಷ್ ಹಾಗೂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.