ADVERTISEMENT

ಜನರ ದಿಕ್ಕು ತಪ್ಪಿಸಲು ಡ್ರಗ್ಸ್‌ ಮಾಫಿಯಾ ಮುನ್ನೆಲೆಗೆ: ಡಿ.ಕೆ.ಸುರೇಶ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:33 IST
Last Updated 9 ಸೆಪ್ಟೆಂಬರ್ 2020, 16:33 IST
ಡಿ.ಕೆ. ಸುರೇಶ್‌
ಡಿ.ಕೆ. ಸುರೇಶ್‌   

ಹಾಸನ: ‘ಕೋವಿಡ್‌ ನಿಯಂತ್ರಣದಲ್ಲಿ ನಡೆದಿರುವ ಭ್ರಷ್ಟಾಚಾರ ಮುಚ್ಚಿಟ್ಟು, ಜನರ ಭಾವನೆಗಳನ್ನು ದಿಕ್ಕುತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಡ್ರಗ್ಸ್ ಮಾಫಿಯಾವನ್ನು ಮುನ್ನೆಲೆಗೆ ತಂದಿದೆ. ಇದಕ್ಕೆ ಪೊಲೀಸರೂ ಸಹಕರಿಸುತ್ತಿದ್ದಾರೆ’ ಎಂದು ಸಂಸದ ಡಿ.ಕೆ.ಸುರೇಶ್ ಬುಧವಾರ ಇಲ್ಲಿ ಆರೋಪಿಸಿದರು.

‘ಇಬ್ಬರ ಮಾತು ಕೇಳಿ, ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಸಿನಿಮಾ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ. ಕಲಾವಿದರನ್ನು ಬಂಧಿಸುವ ಬದಲು ಡ್ರಗ್ಸ್‌ ಪೆಡ್ಲರ್‌ಗಳನ್ನು ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ, ಆ ಕೆಲಸ ಮಾಡದೆ ಇಬ್ಬರು ನಟಿಯರ ಬಂಧನ ಮಾಡಲಾಗಿದೆ. ಇದರಿಂದ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ’ ಎಂದರು.

‘ಕಾಲೇಜು ಮಕ್ಕಳು ಡ್ರಗ್ಸ್‌ಗೆ ಅಂಟಿಕೊಂಡಿರುವುದು ಆತಂಕಕಾರಿ ಸಂಗತಿ. ಆದರೆ, ಪೊಲೀಸ್‌ ಅಧಿಕಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಉದ್ಯಮಿ ಹಾಗೂ ಪ್ರಭಾವಿಗಳಿಗೆ ಕರೆ ಮಾಡಿ ತಮ್ಮ ಮಗನ ಹೆಸರು ಕೇಳಿಬಂದಿದೆ ಎಂದು ಹೆದರಿಸುತ್ತಾರೆ. ದುಡ್ಡು ಮಾಡಿಕೊಳ್ಳಲು ಕೆಲವರಿಗೆ ಡ್ರಗ್ಸ್ ಪ್ರಕರಣ ವರದಾನವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿಯರನ್ನು ಬಿಡುಗಡೆ ಮಾಡಿದರೆ ಸರ್ಕಾರದ ಪ್ರಭಾವಿ ಹಾಗೂ ಅವರ ಪುತ್ರರ, ಉದ್ಯಮಿಗಳ ಹೆಸರು ಹೊರಬೀಳುವ ಸಾಧ್ಯತೆಯಿದೆ. ಆದ್ದರಿಂದ ಅವರಿಗೆ ಜಾಮೀನು ನೀಡದೆ ಕಸ್ಟಡಿಯಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷದವರಿಗೂ ಪ್ರಕರಣದ ಕುರಿತು ಭಯ ಹುಟ್ಟಿದೆ’ ಎಂದರು.

‘ರಾಜ್ಯದಲ್ಲಿ ಕ್ಲಬ್ ನಡೆಸುತ್ತಿದ್ದ ಪ್ರಭಾವಿ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಶ್ರೀಲಂಕಾಗೆ ತೆರಳಿದ್ದ. ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಆತ ಪರಿಶ್ರಮ ವಹಿಸಿದ್ದ. ಇಸ್ಪೀಟ್, ಜೂಜಿನ ದುಡ್ಡಿನಲ್ಲೇ ಹಿಂದಿನ ಸರ್ಕಾರ ಪತನಗೊಳಿಸಲಾಯಿತು ಎಂದಿರುವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸಮಂಜಸವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.