ADVERTISEMENT

ಡ್ರಗ್ಸ್ ಆರೋಪಿಗಳಿಗೆ ಆಶ್ರಯ: ಮನೆ, ಫ್ಲ್ಯಾಟ್ ಮಾಲೀಕರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 16:51 IST
Last Updated 15 ಮಾರ್ಚ್ 2021, 16:51 IST

ಬೆಂಗಳೂರು: ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿತರಾಗಿರುವ ವಿದೇಶಿ ಪ್ರಜೆಗಳಿಗೆ ನಗರದಲ್ಲಿ ಆಶ್ರಯ ನೀಡಿದ್ದ ಮನೆ ಹಾಗೂ ಫ್ಲ್ಯಾಟ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.

ಇತ್ತೀಚಿನ ಡ್ರಗ್ಸ್ ಪ್ರಕರಣದಲ್ಲಿ ನೈಜೀರಿಯಾದ ಕೆಲ ಪ್ರಜೆಗಳು ಸಿಕ್ಕಿಬಿದ್ದಿದ್ದರು. ಹೊರ ರಾಜ್ಯ ಹಾಗೂ ಹೊರ ದೇಶಗಳ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಅವರು, ನಗರಕ್ಕೆ ಡ್ರಗ್ಸ್ ತರುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು.

ಇದೇ ಆರೋಪಿಗಳು ನಗರದಲ್ಲಿ ನೆಲೆಸಿ ಕೃತ್ಯ ಎಸಗುತ್ತಿದ್ದರು. ಕೇಳಿದಷ್ಟು ಬಾಡಿಗೆ ನೀಡಿ ಮನೆ ಹಾಗೂ ಫ್ಲ್ಯಾಟ್‌ಗಳಲ್ಲಿ ವಾಸವಿದ್ದರು. ಆರೋಪಿಗಳ ಹಿನ್ನೆಲೆ ಹಾಗೂ ಕೆಲಸದ ಬಗ್ಗೆ ಮಾಲೀಕರು ಯಾವುದೇ ಮಾಹಿತಿ ಪಡೆಯುತ್ತಿರಲಿಲ್ಲ. ಇದು ಆರೋಪಿಗಳಿಗೆ ಮತ್ತಷ್ಟು ಅನುಕೂಲವಾಗಿತ್ತು. ಅದೇ ಕಾರಣಕ್ಕೆ ಪೊಲೀಸರು, ಇದೀಗ ಮಾಲೀಕರಿಗೆ ನೋಟಿಸ್ ನೀಡುತ್ತಿದ್ದಾರೆ. ನಿಗದಿತ ದಿನದೊಳಗೆ ಉತ್ತರ ನೀಡದಿದ್ದರೆ, ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

'ಯಾವುದೇ ವಿದೇಶಿ ಪ್ರಜೆಯಿದ್ದರೂ ಸೂಕ್ತ ದಾಖಲೆ ಪಡೆದು ಹಾಗೂ ದೇಶಕ್ಕೆ ಬಂದಿರುವ ಕಾರಣ ತಿಳಿದು ಬಾಡಿಗೆ ನೀಡಬೇಕು. ಬಾಡಿಗೆ ನೀಡಿದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬಾಡಿಗೆದಾರರ ಚಲನವಲನ ಬಗ್ಗೆಯೂ ನಿಗಾ ವಹಿಸಬೇಕು. ಡ್ರಗ್ಸ್ ತಡೆಗೆ ಪೊಲೀಸರ ಜೊತೆ ಸಹಕರಿಸಬೇಕು' ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ 'ಪ್ರಜಾವಾಣಿ'ಗೆ ತಿಳಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.