ADVERTISEMENT

ಗುಲಬರ್ಗಾ ವಿವಿ: ಹತ್ತಾರು ಮರಗಳು ಬೆಂಕಿಗಾಹುತಿ

ಹುಲ್ಲು ಸುಡಲು ಬೆಂಕಿ ಹಚ್ಚಿರುವ ಶಂಕೆ, ಕನ್ನಡ ಭವನ, ಮಹಿಳಾ ವಸತಿ ನಿಲಯದ ಎದುರಿನ ಮರಗಳಿಗೆ ಹಾನಿ

ಮನೋಜ ಕುಮಾರ್ ಗುದ್ದಿ
Published 17 ಜನವರಿ 2021, 15:53 IST
Last Updated 17 ಜನವರಿ 2021, 15:53 IST
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಿಂಬದಿಯಲ್ಲಿ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಹಾನಿಗೀಡಾದ ಮರಗಳು
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಿಂಬದಿಯಲ್ಲಿ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಹಾನಿಗೀಡಾದ ಮರಗಳು   

ಕಲಬುರ್ಗಿ: ಬೇಸಿಗೆ ಬಿಸಿಲಿನ ತಾಪಮಾನವನ್ನು ವಿದ್ಯಾರ್ಥಿಗಳಿಗೆ ಕೊಂಚ ಮಟ್ಟಿಗಾದರೂ ಕಡಿಮೆ ಮಾಡುವ ಉದ್ದೇಶದಿಂದ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆಸಲಾಗಿದ್ದ ಹತ್ತಾರು ಮರಗಳು ಬೆಂಕಿಗೆ ಆಹುತಿಯಾಗಿವೆ. ಹುಲ್ಲು ಸುಡಲೆಂದು ಹಚ್ಚಿದ ಬೆಂಕಿಗೆ ಅವು ಸುಟ್ಟು ಕರಕಲಾಗಿವೆ. ವಿಶ್ವವಿದ್ಯಾಲಯದ ಬಯಲು ಜಾಗದಲ್ಲಿ ಅವು ಕಾಣಸಿಗುತ್ತವೆ.

ಕನ್ನಡ ಅಧ್ಯಯನ ಸಂಸ್ಥೆಯ ಹಿಂಭಾಗ, ಗ್ರಂಥಾಲಯದ ಪಕ್ಕದ ಆವರಣ, ಮಹಿಳಾ ವಸತಿ ನಿಲಯದ ಎದುರಿನ ಜಾಗ, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಿಂದ ಅತಿಥಿಗೃಹಕ್ಕೆ ತೆರಳುವ ರಸ್ತೆ ಬಲಬದಿಯಲ್ಲಿ ಹತ್ತಾರು ಎಕರೆಯಲ್ಲಿ ನೆಡಲಾಗಿದ್ದ ಬೇವು, ಬೋರೆ, ಆಲ, ಅರಳಿ ಮರ, ಹೊಂಗೆ ಸೇರಿದಂತೆ ಹಲವು ಬಗೆಯ ಮರಗಳು ಭಸ್ಮವಾಗಿವೆ. ಮರಗಳು ಮತ್ತೆ ಚಿಗಿಯಲಾಗದ ಹಂತ ತಲುಪಿವೆ ಎಂದು ಪರಿಸರ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಒಣಗಿದ ಕಸಕ್ಕೆ ಬೆಂಕಿ

ADVERTISEMENT

ಪ್ರತಿ ವರ್ಷ ಬೇಸಿಗೆ ಆರಂಭವಾಗುವುದಕ್ಕೂ ಮುನ್ನ ಒಣಗಿದ ಕಸಕ್ಕೆ ಬೆಂಕಿ ಹಚ್ಚುವುದು ರೂಢಿ ಇದೆ. ಆದರೆ, ಒಬ್ಬರು ಮುಂದೆ ನಿಂತು ಮರಗಳಿಗೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಬೇಕು. ಆದರೆ, ಬೆಂಕಿ ಹಚ್ಚಿ ಹಾಗೆಯೇ ಬಿಟ್ಟಿದ್ದರಿಂದ ಮೊದಲು ಕಸವನ್ನು ಆವರಿಸಿಕೊಂಡ ಬೆಂಕಿ ನಂತರ ಮರಗಳನ್ನೂ ಆಹುತಿ ತೆಗೆದುಕೊಂಡಿದೆ.

ಕಳೆದ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ವಿ.ವಿ. ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದ ಐದಾರು ಮರಗಳು ನೆಲಕ್ಕುರುಳಿವೆ. ಅವು ಸುಮಾರು 50 ವರ್ಷಕ್ಕೂ ಮೇಲ್ಪಟ್ಟ ಮರಗಳಿದ್ದವು. ಪ್ರಾಕೃತಿಕ ವಿಕೋಪದಿಂದ ಮರಗಳು ಬೀಳುವುದರ ಜೊತೆಗೆ ಮನುಷ್ಯರ ನಿರ್ಲಕ್ಷ್ಯದಿಂದಲೂ ಮರಗಳು ಆಹುತಿಯಾಗಿರುವುದು ಖೇದ ಉಂಟು ಮಾಡುತ್ತಿದೆ. ಮೊದಲಿನಿಂದಲೂ ಕಲಬುರ್ಗಿ ಜಿಲ್ಲೆಯಲ್ಲಿ ಮರಗಳ ಸಂಖ್ಯೆಯೇ ಕಡಿಮೆ. ಇದೀಗ ಬೆಂಕಿ ಹಚ್ಚಿ ನಿರ್ಲಕ್ಷ್ಯದಿಂದ ಆರಿಸದೇ ಹಾಗೇ ಬಿಟ್ಟಿದ್ದಕ್ಕೆ ಮರಗಳು ಆಹುತಿಯಾಗಿದೆ’ ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿ ಶಿವಾನಂದ ಸೇಡಂ.

’ವಾಯುವಿಹಾರಕ್ಕೆ ನಿತ್ಯ ಗುಲಬರ್ಗಾ ವಿ.ವಿ. ಆವರಣಕ್ಕೆ ಹೋಗುತ್ತೇನೆ. ಮಳೆಗಾಲದಲ್ಲಿ ಹಚ್ಚ ಹಸಿರು ವಾತಾವರಣ ಮುದ ನೀಡುತ್ತಿತ್ತು. ಇದೀಗ ಮರಗಳ ಬೊಡ್ಡೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇಡೀ ಪ್ರದೇಶ ಬಯಲಾಗಿದೆ. ತಪ್ಪಿತಸ್ಥರ ವಿರುದ್ಧ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರು ಕ್ರಮ ಜರುಗಿಸಬೇಕು‘ ಎನ್ನುತ್ತಾರೆ ಪೂಜಾ ಕಾಲೊನಿ ನಿವಾಸಿ ಶ್ರೀನಿವಾಸ್ ಆರ್.

ಪರಿಸರಕ್ಕೆ ಕುತ್ತು

ಗುಲಬರ್ಗಾ ವಿಶ್ವವಿದ್ಯಾಲಯವು ತನ್ನ ಒಡಲಲ್ಲಿ ಅಪರೂಪದ ವನರಾಶಿಯನ್ನು ಇಟ್ಟುಕೊಂಡಿದೆ. ಇವುಗಳ ಪೈಕಿ ಹಲವು ಅಳಿವಿನಂಚಿನಲ್ಲಿರುವ ಮರಗಳೂ ಸೇರಿವೆ. ಕ್ರಮೇಣ ವಿವಿಧ ಸಂಸ್ಥೆಗಳಿಗೆ ತನ್ನ ಜಾಗವನ್ನು ಕೊಡುತ್ತಾ ಬಂದಿರುವ ವಿ.ವಿ.ಯ ವ್ಯಾಪ್ತಿ ಬರುಬರುತ್ತಾ ಕ್ಷೀಣಿಸುತ್ತಿದೆ. ಅದರಲ್ಲಿಯೂ ಬೆಂಕಿ ಅವಘಡಗಳು ಆಗುತ್ತಿರುವುದರಿಂದ ಸಸ್ಯ ಸಂಪತ್ತೂ ಕರಗುತ್ತಿದೆ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.