ADVERTISEMENT

ಭಾರಿ ಮಳೆಯಿಂದಾಗಿ ಕೆರೆಗಳಿಗೆ ಹಾನಿ: ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಭಾರಿ ಮಳೆ; ಉತ್ತರ ಪಿನಾಕಿನಿ ನದಿ ಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 20:25 IST
Last Updated 13 ಅಕ್ಟೋಬರ್ 2021, 20:25 IST
ಶಿಡ್ಲಘಟ್ಟ ತಾಲ್ಲೂಕಿನ ನಲ್ಲೋಜನಹಳ್ಳಿ ಅಗ್ರಹಾರ ಕೆರೆ ಒಡೆದು ನೀರು ಹೊರ ಹೋಗುತ್ತಿರುವುದು
ಶಿಡ್ಲಘಟ್ಟ ತಾಲ್ಲೂಕಿನ ನಲ್ಲೋಜನಹಳ್ಳಿ ಅಗ್ರಹಾರ ಕೆರೆ ಒಡೆದು ನೀರು ಹೊರ ಹೋಗುತ್ತಿರುವುದು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರಿ ಮಳೆ ಸುರಿದಿದ್ದು, ಕೆರೆಗಳಿಗೆ ನೀರಿನ ಹರಿವು ಹೆಚ್ಚಿದೆ. ಶಿಡ್ಲಘಟ್ಟ ತಾಲ್ಲೂಕಿನ ನಾರಾಯಣಕೆರೆ, ಚಿಕ್ಕಭದ್ರನಘಟ್ಟ ಕೆರೆ, ನಲ್ಲೋಜನಹಳ್ಳಿ ಅಗ್ರಹಾರ ಕೆರೆ ಹಾಗೂ ಗೋಣಿಮರದಹಳ್ಳಿ ಕೆರೆಗೆ ಹಾನಿಯಾಗಿದೆ.

ನಲ್ಲೋಜನಹಳ್ಳಿ ಅಗ್ರಹಾರ ಕೆರೆಯ ಒಂದು ಬದಿ ಒಡೆದ ಕಾರಣ ರಭಸವಾಗಿ ನೀರು ಹೊರ ಹೋಗುತ್ತಿದೆ. ಕೆರೆ ಸುತ್ತಲಿನ ಜಮೀನುಗಳು ಜಲಾವೃತವಾಗಿವೆ. ಸುತ್ತಲಿನ ಮನೆಗಳವರು ಬೇರೆಡೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಗೋಣಿಮರದಹಳ್ಳಿ ಮತ್ತು ಕೆ. ಹೊಸೂರು ನಡುವಿನ ರಸ್ತೆಯ ಮೋರಿ ಕಿತ್ತು ಹೋಗಿದೆ.

ಗೌರಿಬಿದನೂರು ಹೊರವಲಯದಲ್ಲಿ ಉತ್ತರ ಪಿನಾಕಿನಿ ನದಿ ಹರಿಯುತ್ತಿದೆ. ನೀರಿನ ರಭಸ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಮುಂಜಾಗ್ರತೆಯಾಗಿ ನದಿ ಅಂಚಿನಲ್ಲಿರುವ 800ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರಕ್ಕೆ ತಾಲ್ಲೂಕು ಆಡಳಿತ ಮುಂದಾಗಿದ್ದು, ಸಮೀಪದ ಕಲ್ಯಾಣ ಮಂಟಪದಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನ ಕಾಣದಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದಲಕಾನ ಹಾಗೂ ದೇಶಮಾರ ತಾಂಡ ಸಂಪರ್ಕಿಸುವ ರಸ್ತೆಯಲ್ಲಿನ ಮೇಲ್ಸೇತುವೆ ಕುಸಿದು ಬಿದ್ದಿದೆ. ಮಾರ್ಗಾನುಕುಂಟೆ, ಯಲ್ಲಂಪಲ್ಲಿ, ಮಿಟ್ಟೇಮರಿಯಲ್ಲಿಯೂ ರಸ್ತೆಗಳು ಹಾಳಾಗಿವೆ. ಚಿತ್ರಾವತಿ ಜಲಾಶಯ ತುಂಬಿದೆ.

ADVERTISEMENT

ರಾಗಿ, ಶೇಂಗಾ ಬೆಳೆಗೆ ಹಾನಿ (ಕೋಲಾರ ವರದಿ): ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ರೈತರ ಬದುಕು ನೀರು ಪಾಲಾಗಿದೆ. ಜಮೀನುಗಳಲ್ಲಿ ಮಳೆ ನೀರು ಕೆರೆಯಂತೆ ನಿಂತಿದ್ದು, ರಾಗಿ ಹಾಗೂ ಶೇಂಗಾ ಬೆಳೆ ಕೊಳೆಯಲಾರಂಭಿಸಿವೆ.

ಸತತ ಮಳೆಗೆ ಜಿಲ್ಲೆಯ ಬಹುಪಾಲು ಕೆರೆಗಳು ತುಂಬಿ ಕೋಡಿ ಹರಿದಿದ್ದು, ಕೆರೆಯ ಅಕ್ಕಪಕ್ಕದ ಜಮೀನುಗಳು ಜಲಾವೃತವಾಗಿವೆ. ಹಲವೆಡೆ ಮಳೆ ನೀರು ಜಮೀನುಗಳಲ್ಲಿ ಹಳ್ಳದಂತೆ ಹರಿಯುತ್ತಿದ್ದು, ಬೆಳೆಗಳು ಕೊಚ್ಚಿ ಹೋಗಿವೆ. ಜಮೀನುಗಳಲ್ಲಿನ ಕೊಳವೆಬಾವಿ, ಕೃಷಿ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿವೆ.

ಹದಿನಾರು ವರ್ಷಗಳ ನಂತರ ಜಿಲ್ಲೆಯ ನಂಗಲಿ ಕೆರೆ ಕೋಡಿ ಹರಿದಿದೆ.

ಕರಾವಳಿಯಲ್ಲಿ ಧಾರಾಕಾರ ಮಳೆ: ಮನೆಗಳಿಗೆ ಹಾನಿ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಮನೆಗಳು ಪೂರ್ಣ ಹಾಗೂ 14 ಮನೆಗಳಿಗೆ ಭಾಗಶಃ ಹಾನಿಯಾಗಿವೆ. 104 ವಿದ್ಯುತ್‌ ಕಂಬಗಳು, 5 ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದೆ. ಮಂಗಳೂರಿನ ದೇರೆಬೈಲ್‌ನಲ್ಲಿ ರಸ್ತೆ ಕುಸಿದಿದೆ. ಜಿಲ್ಲೆಯಲ್ಲಿ ಸರಾಸರಿ 10.2 ಸೆಂ.ಮೀ. ಮಳೆಯಾಗಿದ್ದು, ಮೂಡುಬಿದಿರೆ ತಾಲ್ಲೂಕಿನಲ್ಲಿ 16.7, ಬೆಳ್ತಂಗಡಿ ತಾಲ್ಲೂಕಿನಲ್ಲಿ 14, ಮಂಗಳೂರು ತಾಲ್ಲೂಕಿನಲ್ಲಿ 12.6 ಹಾಗೂ ಬಂಟ್ವಾಳ ತಾಲ್ಲೂಕಿನಲ್ಲಿ 10.8 ಸೆಂ.ಮೀ. ಮಳೆಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಅಬ್ಬರಿಸಿದ್ದ ಮಳೆ ಬುಧವಾರ ಕೊಂಚ ತಗ್ಗಿತ್ತು. 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದ್ದು, ತಾಲ್ಲೂಕಿನ ಐರೋಡಿಯಲ್ಲಿ 30.4 ಸೆಂ.ಮೀ, ಬಾರ್ಕೂರಿನಲ್ಲಿ 29 ಸೆಂ.ಮೀ ಹಾಗೂ ಕುರ್ಕಾಲಿನಲ್ಲಿ 26.6 ಸೆಂ.ಮೀ ಮಳೆ ಬಿದ್ದಿದೆ.

ಕಾಪು ತಾಲ್ಲೂಕಿನ ನಂದಿಕೂರು, ಪಡು, ಬೆಳಪು, ಬೆಳ್ಳೆ, ಉಡುಪಿ ತಾಲ್ಲೂಕಿನ ಉದ್ಯಾವರದಲ್ಲಿ ಗಾಳಿ ಮಳೆಗೆ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲ್ಲೂಕಿನ ಕಣಜಾರು ಗ್ರಾಮದಲ್ಲಿ ಭತ್ತದ ಬೆಳೆ ನಾಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.