ADVERTISEMENT

ಸ್ಪರ್ಧಿಸುವಂತೆ ಎಲ್ಲರೂ ಒತ್ತಾಯಿಸುತ್ತಿದ್ದಾರೆ: ಡಿ.ವಿ. ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 16:13 IST
Last Updated 1 ಜನವರಿ 2024, 16:13 IST
ಡಿ.ವಿ. ಸದಾನಂದ ಗೌಡ
ಡಿ.ವಿ. ಸದಾನಂದ ಗೌಡ   

ಬೆಂಗಳೂರು: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈ ಒತ್ತಡ ಮೀರಿ ನಿಲ್ಲುವಲ್ಲಿ ಯಶಸ್ವಿ ಆಗುತ್ತೇನೆಂದು ಸದ್ಯಕ್ಕೆ ಹೇಳುವುದಕ್ಕೆ ಆಗುವುದಿಲ್ಲ’ ಎಂದು ಸಂಸದ ಡಿ.ವಿ. ಸದಾನಂದ ಗೌಡ ತಿಳಿಸಿದರು. ಆ ಮೂಲಕ, ಮತ್ತೊಮ್ಮೆ ಕಣಕ್ಕಿಳಿಯುವ ಸುಳಿವು ಪರೋಕ್ಷವಾಗಿ ನೀಡಿದರು.

ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾನು 30 ವರ್ಷದ ರಾಜಕಾರಣ ನೋಡಿದ್ದೇನೆ. ಹೊಸಬರು ಬರಬೇಕು ಎನ್ನುವ ಕಾರಣಕ್ಕೆ  ಚುನಾವಣೆ ರಾಜಕೀಯದಿಂದ ದೂರ ಸರಿಯುವ ಪ್ರಯತ್ನ ಮಾಡಿದ್ದೇನೆ. ಆದರೆ, ಅಶೋಕ, ಬೊಮ್ಮಾಯಿ‌, ಡಾ. ಅಶ್ವತ್ಥನಾರಾಯಣ, ಸೋಮಶೇಖರ್, ದಾಸರಹಳ್ಳಿ ಮುನಿರಾಜು ಸೇರಿದಂತೆ ಪಕ್ಷದ ಎಲ್ಲ ನಾಯಕರು ನೀವೇ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿದ್ದಾರೆ’ ಎಂದರು.

‘ನಾನು ನನ್ನ ಕ್ಷೇತ್ರದಲ್ಲಿ ಯಾರನ್ನೂ ದೂರ ಇಟ್ಟವನಲ್ಲ. ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಅನೇಕ ಆರೋಪ, ಅಪವಾದ ಬಂದಾಗಲೂ ಎಲ್ಲರೂ ಜೊತೆಗೆ‌ ನಿಂತಿದ್ದಾರೆ. ಸಣ್ಣ ಕೆಲಸ ಮಾಡಿ ದೊಡ್ಡ ಪ್ರಚಾರ ಪಡೆಯುವ ವ್ಯಕ್ತಿ ನಾನಲ್ಲ‌.‌ ಈ ಹಂತದಲ್ಲಿ ನಾನು ಏನೂ ಹೇಳುವುದಿಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತದೊ ನೋಡಬೇಕು’ ಎಂದರು.

ADVERTISEMENT

ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಮಾಜಿ ಸಚಿವ ವಿ. ಸೋಮಣ್ಣ ಕಣ್ಣಿಟ್ಟಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸೋಮಣ್ಣನವರೇ ನಾನು ಸ್ಪರ್ಧಿಸುವಂತೆ ಹೇಳಿದ್ದಾರೆ. ವಿರೋಧಿಸುತ್ತಿದ್ದವರೆಲ್ಲ ನಾನೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಿರುವಾಗ ಸೋಮಣ್ಣ ಉತ್ತರಕ್ಕೆ ಆಕಾಂಕ್ಷಿ ಆಗುವುದು ಎಲ್ಲಿಂದ ಬಂತು’ ಎಂದರು.

‌‘ನಾವೂ ರಾಮನ ಭಕ್ತರು’ ಎಂಬ ಸಚಿವ ಜಿ. ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪರಮೇಶ್ವರ ಅವರು ರಾಮ ಎಲ್ಲರ ದೇವ ಎಂದು ನಂಬಿದ್ದಾರಲ್ಲ. ಇತರರಿಗೂ ಆ ಬುದ್ಧಿ ಬರಲಿ. ಮುಸ್ಲಿಂ ಮಹಿಳೆಯೊಬ್ಬರು ರಾಮನನ್ನು ನೋಡಲು ಯಾತ್ರೆ ಹೊರಟಿರುವುದನ್ನು ನೋಡಿದರೆ ಎಲ್ಲರೂ ರಾಮನನ್ನು ಒಪ್ಪುತ್ತಿದ್ದಾರೆ. ಪರಮೇಶ್ವರ ಅವರೂ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.