ADVERTISEMENT

ಕೊರೊನಾ ನಿರ್ವಹಣೆ | ಭಾರತದ ಸಾಧನೆ ಶ್ರೇಷ್ಠ ಎಂದ ಡಿ.ವಿ.ಸದಾನಂದ ಗೌಡ

ಒಂದು ದೇಶ ಒಂದು ಕಾರ್ಡ್‌ ಮಾರ್ಚ್‌ನೊಳಗೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 18:31 IST
Last Updated 10 ಜುಲೈ 2020, 18:31 IST
ಡಿ.ವಿ.ಸದಾನಂದ ಗೌಡ
ಡಿ.ವಿ.ಸದಾನಂದ ಗೌಡ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಆತ್ಮನಿರ್ಭರ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಈಗಾಗಲೇ ₹ 4,267 ಕೋಟಿ ಬಿಡುಗಡೆಯಾಗಿದೆ' ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಶುಕ್ರವಾರ ಇಲ್ಲಿ ಬೆಂಗಳೂರಿನ ಇತರ ಇಬ್ಬರು ಸಂಸದರಾದ ಪಿ.ಸಿ.ಮೋಹನ್‌ ಮತ್ತು ತೇಜಸ್ವಿ ಸೂರ್ಯ ಜತೆಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಜನಸಂಖ್ಯೆ ಕಡಿಮೆ ಇರುವ ಹಾಗೂ ಸಂಪನ್ಮೂಲ ಜಾಸ್ತಿ ಇರುವ ಆ ದೇಶಗಳಿಗೆ ಹೋಲಿಸಿದರೆ ಭಾರತವು ಕೊರೊನಾ ಹಾವಳಿ ತಡೆ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ದಿಟ್ಟ ನಾಯಕತ್ವವೇ ಕಾರಣ.ಮೋದಿಯವರ ನೇತೃತ್ವದಲ್ಲಿ ಭಾರತವು ಅತ್ಯಂತ ವ್ಯವಸ್ಥಿತವಾಗಿ ಹೆಜ್ಜೆ ಹಾಕಿತು. ಕೊರೊನಾ ತಂದೊಡ್ಡಿರುವ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ, ಜೀವ ಉಳಿಸುವುದಕ್ಕೆ ಮೊದಲ ಆದ್ಯತೆ ನೀಡಿತು. ಇದು ಜಗತ್ತಿನ ಗಮನ ಸೆಳೆಯುವಲ್ಲಿ ಸಫಲವಾಗಿದೆ ಎಂದರು.

‘ಪ್ರಧಾನಿ ಮೋದಿ ಅವರು ₹ 20 ಲಕ್ಷ ಕೋಟಿ ಮೊತ್ತದ ಸ್ವಾವಲಂಬಿ ಭಾರತ (ಆತ್ಮನಿರ್ಭರ) ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ₹ 3 ಲಕ್ಷ ಕೋಟಿ ರೂಪಾಯಿ ಭದ್ರತಾ ರಹಿತ ಸಾಲ ಯೋಜನೆ ರೂಪಿಸಲಾಗಿದೆ.‌ ಒಂದು ದೇಶ – ಒಂದೇ ರೇಷನ್‌ ಕಾರ್ಡ್‌ ಪರಿಕಲ್ಪನೆಯೊಂದಿಗೆ ದೇಶಾದ್ಯಂತ ಮಾನ್ಯವಾಗುವ ರೇಷನ್‌ ಕಾರ್ಡ್‌ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಮುಂಬರುವ ಮಾರ್ಚ್‌ ಅಂತ್ಯಕ್ಕೆ ಮೂರ್ಣಗೊಳ್ಳಲಿದೆ. ಯಾವುದೇ ರಾಜ್ಯದ ವ್ಯಕ್ತಿ ಬೇರೆ ರಾಜ್ಯಕ್ಕೆ ವಲಸೆಹೋದಾಗ ಈ ಪಡಿತರ ಚೀಟಿ ಬಳಸಿ ರೇಷನ್‌ ಪಡೆದುಕೊಳ್ಳಬಹುದು’ ಎಂದು ವಿವರಿಸಿದರು.

ADVERTISEMENT

‘ಜನ್‌ಧನ್‌ ಬ್ಯಾಂಕ್‌ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಈಗಾಗಲೇ ₹ 30,611 ಕೋಟಿ ವರ್ಗಾವಣೆ ಮಾಡಲಾಗಿದೆ. 8.19 ಕೋಟಿ ಬಡಕುಟುಂಬಗಳಿಗೆ “ಉಜ್ವಲ” ಯೋಜನೆಯಡಿ ಉಚಿತ ಅಡಿಗೆ ಅನಿಲ ಸಿಲಿಂಡರ್‌ ಪೂರೈಸಲು ₹13 ಸಾವಿರ ಕೋಟಿ ಒದಗಿಸಲಾಗಿದೆ. ‌ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಡಿ 8.7 ಕೋಟಿ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ ₹ 18,890 ಕೋಟಿ ವರ್ಗಾಯಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸ್ವಾವಲಂಬಿ ಭಾರತ ಯೋಜನೆಯಡಿ ರೈತರಿಗೆ ₹ 2 ಲಕ್ಷ ಕೋಟಿ ರಿಯಾಯತಿ ಸಾಲ ಒದಗಿಸಲಾಗುತ್ತಿದೆ. ಇದಕ್ಕಾಗಿ ಜೂನ್‌ ಕೊನೆವೇಳೆಗೆ 70.32 ಲಕ್ಷ ಕಿಸಾನ್‌ ಕ್ರೆಡಿಟ್ ಕಾರ್ಡುಗಳನ್ನು ವಿತರಿಸಲಾಗಿದೆ. ಇದುವರೆಗೆ ಈ ಕಾರ್ಡುಗಳನ್ನು ಪಡೆದಿರುವ ರೈತರು ಒಟ್ಟು ₹ 62,870 ಕೋಟಿ ಸಾಲ ಪಡೆಯಲು ಅರ್ಹರಾಗಿದ್ದಾರೆ. ಕೋಲ್ಡ್‌ ಸ್ಟೋರೇಜ್‌, ಕೃಷಿ ಉತ್ಪನ್ನ ಸಾಗಣೆ ವ್ಯವಸ್ಥೆ ಸೇರಿದಂತೆ ಕೃಷಿ ಮೂಲಭೂತ ಸೌಕರ್ಯಕ್ಕಾಗಿ ₹ 1 ಲಕ್ಷ ಕೋಟಿ ತೆಗೆದಿರಸಲಾಗಿದೆ’ ಎಂದು ಹೇಳಿದರು.

‘ಎಪಿಎಂಸಿ ಕಾಯ್ದೆಗೆ ಸುಧಾರಣೆ ತರಲಾಗಿದ್ದು ರೈತರು ತಮ್ಮಬೆಳೆಯನ್ನು ಹೆಚ್ಚು ಬೆಲೆ ಸಿಗುವ ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟಮಾಡಿಕೋಳ್ಳಬಹುದು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗಾಗಿ ₹ 9,407 ಕೋಟಿ ಹಾಗೂ ಪಶುಸಂಗೋಪನೆಗಾಗಿ ₹ 15 ಸಾವಿರ ಕೋಟಿ ಒದಗಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚುವರಿಯಾಗಿ ₹ 40 ಸಾವಿರ ಕೋಟಿ ಒದಗಿಸಲಾಗಿದೆ. ಕೊರೊನಾದಿಂದ ಉದ್ಯೋಗ ಕಳೆದುಕೊಂಡಿರುವ ವಲಸೆಕಾರ್ಮಿಕರಿಗೆ ಇದರಿಂದ ಹೆಚ್ಚುವರಿ ಉದ್ಯೋಗಾವಕಾಶ ದೊರೆಯಲಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಬಜೆಟ್‌ನಲ್ಲಿ ₹ 61 ಸಾವಿರ ಕೋಟಿ ಒದಗಿಸಲಾಗಿತ್ತು’ ಎಂದು ಸಚಿವರು ಮಾಹಿತಿ ನೀಡಿದರು.

‘ರಾಜ್ಯಗಳ ಸಾಲ ಎತ್ತುವಳಿ ಮಿತಿ ಜಿಡಿಪಿಯ (ಆಯಾ ರಾಜ್ಯಗಳ) ಶೇಕಡಾ 3 ಇತ್ತು. ಅದನ್ನು ಈಗ ಶೇಕಡಾ 5ಕ್ಕೆ ಏರಿಸಲಾಗಿದೆ. ರಾಜ್ಯಗಳು ಆಡಳಿತಾತ್ಮಕ ಸುಧಾರಣೆಗಾಗಿ ಹೆಚ್ಚುವರಿ ಸಂಪನ್ಮೂಲ (ಸಾಲ) ಕ್ರೋಡೀಕರಿಸಬಹುದಾಗಿದೆ.
ಸ್ವಾವಲಂಬಿ ಭಾರತದ ಕನಿಸಿನ ನನಸಿಗಾಗಿ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಉದಾಹರಣೆಗೆ ಈ ಮುಂಚೆ ಭಾರತದಲ್ಲಿ ಸೋಂಕು ನಿರೋಧಕ ಪಿಪಿಇ ಕಿಟ್ಟುಗಳನ್ನು ತಯಾರಿಸುತ್ತಿರಲಿಲ್ಲ. ಈಗ ದಿನಕ್ಕೆ 4 ಲಕ್ಷಕ್ಕಿಂತ ಅಧಿಕ ಸ್ವದೇಶಿ ಪಿಪಿಇ ಕಿಟ್ಟುಗಳು ತಯಾರಾಗುತ್ತಿವೆ’ ಎಂದು ಹೇಳಿದರು.

ರಸಗೊಬ್ಬರ ಉತ್ಪಾದನೆಯಲ್ಲೂ ಸ್ವಾವಲಂಬನೆ

‘ರಸಗೊಬ್ಬರ ಉತ್ಪಾದನೆಯಲ್ಲಿಯೂ ಸ್ವಾವಲಂಬಿಯಾಗಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾರ್ಷಿಕವಾಗಿ 12.7 ಲಕ್ಷ ಟನ್‌ ಯುರಿಯಾ ಉತ್ಪಾದನೆ ಸಾಮರ್ಥ್ಯದ ರಾಮಗುಂಡಮ್‌ ರಸಗೊಬ್ಬರ ಕಾರ್ಖಾನೆ ಕೆಲವೇ ತಿಂಗಳುಗಳಲ್ಲಿ ಉತ್ಪಾದನೆ ಆರಂಭಿಸಲಿದೆ. ತಲ್ಚೇರ್‌ ಸೇರಿದಂತೆ ಇನ್ನೂ ನಾಲ್ಕು ರಸಗೊಬ್ಬರ ಘಟಕಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗಿದೆ’ ಎಂದು ಸದಾನಂದ ಗೌಡ ಹೇಳಿದರು.

‘ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲೂ ಸ್ವಾವಲಂಬಿಯಾಗಲು ಯೋಜನೆಗಳನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ ದೇಶದ ಮೂರು ಕಡೆ ‘ಬಲ್ಕ್‌ ಮೆಡಿಸಿನ್‌ ಫಾರ್ಮಾ ಪಾರ್ಕ್‌’ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಲಾಗಿದೆ. ಇದಕ್ಕಾಗಿ ಇಲಾಖೆ ₹ 3,000 ಕೋಟಿ ತೆಗೆದಿರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.