ADVERTISEMENT

13 ಸಂಸದರ ತೇಜೋವಧೆಗೆ ಪ್ರಯತ್ನ ನಡೆದಿದೆ, ನಾಯಕರು ಗೊಂದಲಕ್ಕೆ ತೆರೆ ಎಳೆಯಲಿ: ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 13:15 IST
Last Updated 6 ಜೂನ್ 2023, 13:15 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ   

ಬೆಂಗಳೂರು: ‘ಪಕ್ಷದ 13 ಮಂದಿ ಸಂಸದರ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ. ಈ ಗೊಂದಲಕ್ಕೆ ತೆರೆ ಎಳೆಯಲು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಮುಂದಾಗಬೇಕು’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಒತ್ತಾಯಿಸಿದ್ದಾರೆ.

‘ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ನಮಗೆಲ್ಲ ವಯಸ್ಸಾಗಿದೆ, ಅನಾರೋಗ್ಯದ ಕಾರಣ ಟಿಕೆಟ್‌ ನೀಡುವುದಿಲ್ಲವೆಂದು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಪಕ್ಷ ಚುನಾವಣೆಯಲ್ಲಿ ಸೋತಿರುವುದನ್ನೇ ನೆಪ ಮಾಡಿಕೊಂಡು ಮನೋ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆದಿದೆ. ನಮ್ಮ ಪಕ್ಷದ ನಾಯಕರನ್ನು ನಿರ್ವೀರ್ಯಗೊಳಿಸುವ ಪ್ರಯತ್ನ ನಡೆದಿದೆ. ಆದ್ದರಿಂದ ನಾಯಕರು ಸ್ಪಷ್ಟನೆ ನೀಡಲೇಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈ ರೀತಿ ಸುದ್ದಿಯನ್ನು ಹರಿಬಿಟ್ಟಿದ್ದರ ಹಿಂದೆ ಯಾರಿದ್ದಾರೊ ಗೊತ್ತಿಲ್ಲ. ಆದರೆ, ಇದು ಒಳ್ಳೆಯದಲ್ಲ. ಪಕ್ಷದ 25 ಸಂಸದರಲ್ಲಿ 13 ಮಂದಿ ಕೆಲಸವೇ ಮಾಡಿಲ್ಲ. ಮುದುಕರಾಗಿದ್ದಾರೆ, ಇನ್ನು ಕೆಲವರು ಅನಾರೋಗ್ಯ ಪೀಡಿತರು ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗುವುದಿಲ್ಲ ಎಂಬ ರೀತಿಯಲ್ಲಿ ವ್ಯಾಖ್ಯಾನ ನಡೆಸಲಾಗಿದೆ. ನಾವೆಲ್ಲ ಮತದಾರರಿಂದ ಗೆದ್ದು ಬಂದವರು. 12 ಸಂಸದರು ನನಗೆ ಕರೆ ಮಾಡಿ ಅಳು ತೋಡಿಕೊಂಡಿದ್ದಾರೆ. ಈ ಗೊಂದಲಗಳಿಗೆ ಇತಿಶ್ರೀ ಹಾಡಬೇಕಾದವರು ಯಾರೂ ಮಾತನಾಡುತ್ತಿಲ್ಲ. ಆದಷ್ಟು ಬೇಗ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ, ಬೇರೆ ಬೇರೆ ಸಂದೇಶಗಳು ರವಾನೆಯಾಗುತ್ತದೆ ಎಂದು ಸದಾನಂದಗೌಡ ಹೇಳಿದರು.

‘ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲು ಅನಿರೀಕ್ಷಿತ. ರಾಜ್ಯದ ಜನತೆ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೆಲ್ಲ ಆತ್ಮಾವಲೋಕನ ನಡೆಯುತ್ತಿತ್ತು. ಈಗ ಆತ್ಮಾವಲೋಕನ ಮಾಡಿಕೊಳ್ಳಲು ಆತ್ಮಗಳೇ ಇಲ್ಲದಂತಾಗಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಬಿಜೆಪಿಗೆ ಚುನಾವಣೆಯಲ್ಲಿ ಸೋಲು ಹೊಸತಲ್ಲ. ಹಿಂದೆ ವಾಜಪೇಯಿ ಅವರು ಕೂಡಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಆ ಬಳಿಕ ಗೆದ್ದಿದ್ದಾರೆ. ಆದ್ದರಿಂದ ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ. ನಮಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಕಾರ್ಯಕರ್ತರ ಮನೋಬಲ ಕುಸಿಯದಂತೆ ನೋಡಿಕೊಳ್ಳುವುದು ನಾಯಕರ ಕೆಲಸ’ ಎಂದು ಆವರು ತಿಳಿಸಿದರು.

‘ನನಗೆ ಪಕ್ಷದ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನವನ್ನು ಕೊಟ್ಟಿದ್ದು ಪಕ್ಷ. ಇದಕ್ಕಾಗಿ ನಾನು ಯಾರ ಹಿಂದೆಯೂ ಓಡಾಡಲಿಲ್ಲ. ಪಕ್ಷ ಕೊಟ್ಟ ಕೆಲಸವನ್ನು ಮಾಡಿದ್ದೇನೆ. ಕೆಎಂಎಫ್‌ ಅಧ್ಯಕ್ಷ ಸ್ಥಾನವನ್ನು ಕೇಳಿದ್ದು ಬಿಟ್ಟರೆ ಬೇರೆ ಏನನ್ನೂ ಕೇಳಿರಲಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ಯಡಿಯೂರಪ್ಪ, ಅನಂತಕುಮಾರ್‌, ಕೆ.ಎಸ್‌.ಈಶ್ವರಪ್ಪ ಸೇರಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯವ ಕೆಲಸ ಮಾಡಿದ್ದೆ. ಇವರೆಲ್ಲರೂ ನನಗೆ ಮಾರ್ಗದರ್ಶನ ಮಾಡಿದ್ದರು. ಈಗ ನನ್ನ ಮನೋಬಲ ಕುಗ್ಗಿಸುವ ಪ್ರಯತ್ನ ನಡೆದಿದೆ’ ಎಂದು ಸದಾನಂದಗೌಡ ಬೇಸರ ವ್ಯಕ್ತಪಡಿಸಿದರು.

‘ಸೋಲನ್ನು ಅರಗಿಸಿಕೊಳ್ಳಬೇಕು’

‘ಸೋಲನ್ನು ಅರಗಿಸಿಕೊಳ್ಳಬೇಕು. ಅನಗತ್ಯ ಮತ್ತು ಕ್ಷುಲ್ಲಕ ಹೇಳಿಕೆಗಳು, ಪ್ರಚಾರಕ್ಕಾಗಿ ಮತ್ತು ವೈಯಕ್ತಿಕ ಪ್ರತಿಷ್ಠೆಗಾಗಿ ಮಾಧ್ಯಮಗಳ ಮುಂದೆ ಹೋಗುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು’ ಎಂದು ಸದಾನಂದಗೌಡ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

‘ಕಾದು ನೋಡುವ ತಂತ್ರಗಾರಿಕೆ ಬೇಕು. ಜನಾದೇಶಕ್ಕೆ ತಲೆಬಾಗಿ ಸಮಯಾವಕಾಶ ನೀಡಬೇಕು. 100 ದಿನಗಳ ಅವರ ನಡೆಯನ್ನು ನೋಡಿ ಮುಂದಿನ ಹೆಜ್ಜೆ ಇಡಬೇಕು. ಆತುರದ ಹೆಜ್ಜೆಗಳು ಹೆಚ್ಚು ಅಪಾಯಗಳನ್ನು ತರಬಲ್ಲದು. ಒಂದು ವರ್ಷ ಇನ್ನಷ್ಟು ಹೆಚ್ಚು ಸವಾಲುಗಳನ್ನು ಎದುರಿಸುವ ದಿನಗಳು ಬರಲಿವೆ. ಸ್ಥಳೀಯ ಸಂಸ್ಥೆಗಳ ಮತ್ತು ಲೋಕಸಭಾ ಚುನಾವಣೆಗಳು ಮತ್ತಷ್ಟು ನಮ್ಮ ಪಕ್ಷದ ನಿರ್ಣಾಯಕ ದಿನಗಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.