ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಕಡಿತ: ₹ 5 ಸಾವಿರ ಕೋಟಿ ಖೋತಾ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 1:17 IST
Last Updated 4 ಜನವರಿ 2020, 1:17 IST
   

ಬೆಂಗಳೂರು: ರಾಜ್ಯ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ನೀಡುವ ರಾಜ್ಯದ ಪಾಲಿನ ತೆರಿಗೆಯಲ್ಲೂ ಮುಂದಿನ ವರ್ಷ ಸುಮಾರು ₹5 ಸಾವಿರ ಕೋಟಿ ಕಡಿತವಾಗುವ ಸಾಧ್ಯತೆ ಇದೆ.

2020–21ರ ಹಣಕಾಸು ವರ್ಷದಲ್ಲಿ ಕೇಂದ್ರ ನೀಡುವ ರಾಜ್ಯದ ಪಾಲಿನ ತೆರಿಗೆಯಲ್ಲಿ ಈ ಮೊತ್ತವನ್ನು ಕಡಿಮೆ ಮಾಡಲಾಗುತ್ತದೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಮತ್ತಷ್ಟು ಪ್ರತಿಕೂಲ ಪರಿಣಾಮ ಬೀರಲಿದೆ.

ಈಗಾಗಲೇ ರಾಜ್ಯದಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಕುಂಠಿತವಾಗಿದ್ದು,ಮುಂದಿನ ವರ್ಷಗಳಲ್ಲಿ ಕೇಂದ್ರದಿಂದ ಹಂಚಿಕೆಯಾಗುವ ತೆರಿಗೆಯ ಪಾಲಿನಲ್ಲೂ ಕಡಿತವಾದರೆ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಲಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ಬರಬೇಕಾದ ಹಣವೂ ಸಕಾಲಕ್ಕೆ ಬರುತ್ತಿಲ್ಲ. ಪ್ರಸ್ತುತ ₹7 ಸಾವಿರ ಕೋಟಿಯನ್ನು ಕೇಂದ್ರ ಬಾಕಿ ಉಳಿಸಿಕೊಂಡಿದ್ದು, ಇದರಿಂದಾಗಿ ಕೆಲವು ಯೋಜನೆಗಳಿಗೆ ಹಣದ ಕೊರತೆ ಕಾಡಬಹುದು. ಹಲವು ಅಭಿವೃದ್ಧಿ ಕಾರ್ಯಗಳನ್ನು ಮುಂದೂಡುವ ಪರಿಸ್ಥಿತಿ ಉಂಟಾಗಬಹುದು ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಸರ್ಕಾರ ಮುಂದಿನ ಬಜೆಟ್ ಮಂಡಿಸುವ ಸಮಯದಲ್ಲಿ ರಾಜ್ಯದ ಪಾಲಿನ ತೆರಿಗೆ ಪ್ರಮಾಣವನ್ನು ತಗ್ಗಿಸುವಸಾಧ್ಯತೆ ಇದೆ. ಸುಮಾರು ₹5 ಸಾವಿರ ಕೋಟಿ ಕಡಿತಆಗಬಹುದು ಎಂದು ಕೇಂದ್ರದ ಅಧಿಕಾರಿಗಳು ಮುನ್ಸೂಚನೆ ನೀಡಿರುವುದಾಗಿ ಅವರು ಹೇಳಿದರು.

2019ರ ಫೆಬ್ರುವರಿಯಲ್ಲಿ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ₹39,806 ಕೋಟಿ ಹಂಚಿಕೆ ಮಾಡಲಾಗಿತ್ತು. ನಂತರ ಜುಲೈನಲ್ಲಿ ₹1,672 ಕೋಟಿ ಕಡಿಮೆಮಾಡಿ, ₹38,134 ಕೋಟಿಗೆ ತಗ್ಗಿಸಲಾಯಿತು.ಕೇಂದ್ರದ ಮುಂದಿನ ಬಜೆಟ್‌ನಲ್ಲೂ ಇದೇ ಪರಿಸ್ಥಿತಿ
ಮುಂದುವರಿಯಬಹುದು. ಆರ್ಥಿಕ ಹಿಂಜರಿತದಿಂದಾಗಿ ಜಿಎಸ್‌ಟಿ ಸೇರಿದಂತೆ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ
ಇಳಿಕೆಯಾಗಬಹುದು ಎಂದು ಅವರು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇಂದ್ರ ₹ 2,700 ಕೋಟಿ ಬಾಕಿ ಉಳಿಸಿಕೊಂಡಿದೆ. ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಇತರ ಇಲಾಖೆಗಳ ಅಡಿಯಲ್ಲಿ ಕೇಂದ್ರದ ನೆರವಿನೊಂದಿಗೆ ನಡೆಯುತ್ತಿರುವ ಯೋಜನೆಗಳಿಗೂ ಹಣದ ಕೊರತೆ ಎದುರಾಗುವ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸುವ ಬಜೆಟ್ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.