ADVERTISEMENT

ಆರ್ಥಿಕ ಗಣತಿಗೆ ಪೊಲೀಸ್‌ ಭದ್ರತೆ

ತಪ್ಪು ತಿಳಿವಳಿಕೆ l ಮಂಡ್ಯದ ಗಣತಿದಾರರಿಗೆ ಬೆದರಿಕೆ l ಸಾಂಖ್ಯಿಕ ಇಲಾಖೆ ಸುತ್ತೋಲೆ

ಎಂ.ಎನ್.ಯೋಗೇಶ್‌
Published 16 ಜನವರಿ 2020, 19:52 IST
Last Updated 16 ಜನವರಿ 2020, 19:52 IST

ಮಂಡ್ಯ: ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಕಿಚ್ಚು ದೇಶದ ಮಹತ್ವಾಕಾಂಕ್ಷಿ ‘ರಾಷ್ಟ್ರೀಯ ಆರ್ಥಿಕ ಗಣತಿ’ಗೂ ತಟ್ಟಿದೆ. ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಮಂಡ್ಯದ ವಿವಿಧೆಡೆ ಆರ್ಥಿಕ ಗಣತಿದಾರರಿಗೆ ಮಾಹಿತಿ ನೀಡಲು ಜನ ನಿರಾಕರಿಸುತ್ತಿದ್ದಾರೆ. ಹೀಗಾಗಿ, ಪೊಲೀಸ್‌ ಭದ್ರತೆಯಲ್ಲಿ ಗಣತಿ ಮಾಡುವಂತೆ ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.

ಜನರ ಆರ್ಥಿಕ ಸ್ಥಿತಿ ಅಧ್ಯಯನ, ಸಾರ್ವಜನಿಕ–ಖಾಸಗಿ ಕ್ಷೇತ್ರದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದ ಆರ್ಥಿಕ ಚಟುವಟಿಕೆಯ ಉದ್ಯಮ ಪಟ್ಟಿ ತಯಾರಿಸುವ ಉದ್ದೇಶದಿಂದ ಐದು ವರ್ಷಗಳಿಗೊಮ್ಮೆ ದೇಶದಾದ್ಯಂತ ಆರ್ಥಿಕ ಗಣತಿ ನಡೆಯುತ್ತದೆ. 1977ರಿಂದ ಇಲ್ಲಿಯವರೆಗೆ ಆರು ಗಣತಿ ಪೂರ್ಣಗೊಂಡಿದ್ದು, ಏಳನೇ ಗಣತಿ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಸಿಎಎ ಹೋರಾಟವೂ ನಡೆಯುತ್ತಿದ್ದು, ಪೌರತ್ವ ನೀಡುವುದಕ್ಕಾಗಿಯೇ ಗಣತಿ ಮಾಡಲಾಗುತ್ತಿದೆ, ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ತಪ್ಪು ತಿಳಿವಳಿಕೆ ಉಂಟಾಗಿದೆ.

ಮಂಡ್ಯದ ಗುತ್ತಲು, ಮುಸ್ಲಿಂ ಕಾಲೊನಿ, ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಜನರು ಗಣತಿ ಸಿಬ್ಬಂದಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಿಎಎ ಹಾಗೂ ಆರ್ಥಿಕ ಗಣತಿ ನಡುವೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲು ಪ್ರಯತ್ನಿಸಿದರೂ ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕಿಲ್ಲ.

ADVERTISEMENT

‘ಆರ್ಥಿಕ ಗಣತಿಯ ಉದ್ದೇಶ ವಿವರಿಸಿದರೂ ಮಂಡ್ಯದ ಗುತ್ತಲು ಕಾಲೊನಿಯ ಜನರು ಮಾಹಿತಿ ನೀಡಲು ನಿರಾಕರಿಸಿದರು. ಯಾರೇ ಬಂದರೂ ಮಾಹಿತಿ ನೀಡದಂತೆ, ದಾಖಲಾತಿ ತೋರಿಸದಂತೆ ಬಡಾವಣೆಯಲ್ಲಿರುವ ಮಸೀದಿ ಮೌಲ್ವಿಗಳು ತಿಳಿಸಿದ್ದಾರೆ. ಹೀಗಾಗಿ, ನಮ್ಮ ಬಡಾವಣೆಗೆ ಬರಬೇಡಿ ಎನ್ನುತ್ತಿದ್ದಾರೆ’ ಎಂದು ಆರ್ಥಿಕ ಗಣತಿ ಮಂಡ್ಯ ಜಿಲ್ಲಾ ವ್ಯವಸ್ಥಾಪಕ ಚೇತನ್‌ ಹೇಳಿದರು.

ಬೆಂಗಳೂರು, ತುಮಕೂರು, ಮಂಗಳೂರು, ಮೈಸೂರು ನಗರಗಳಲ್ಲೂ ಜನರು ಗಣತಿದಾರರಿಗೆ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ಸಿಬ್ಬಂದಿ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ತುಮಕೂರು ನಗರದ ಪಾಲಿಕೆ ಸದಸ್ಯರೊಬ್ಬರು ತಮ್ಮ ವಾರ್ಡ್‌ಗೆ ಗಣತಿದಾರರು ಬರಕೂಡದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ತಿಳಿಸಿದರು.

ಇಲಾಖೆ ಸುತ್ತೋಲೆ: ತಪ್ಪು ತಿಳಿವಳಿಕೆ ನಿವಾರಿಸಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಯೋಜನಾ ಇಲಾಖೆ) ಶಾಲಿನಿ ರಜನೀಶ್‌ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಪೊಲೀಸ್‌ ಭದ್ರತೆಯಲ್ಲಿ ಗಣತಿ ಕಾರ್ಯ ಮುಂದುವರಿಸಬೇಕು. ಗಣತಿದಾರರಿಗೆ ಬೆದರಿಕೆ, ಹಿಂಸೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

‘ಸಿಎಎ ಹಾಗೂ ಆರ್ಥಿಕ ಗಣತಿಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ತಪ್ಪು ತಿಳಿವಳಿಕೆ ಮೂಡಿದ್ದು, ಅದನ್ನು ಹೋಗಲಾಡಿಸಲು ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಶಾಲಿನಿ ರಜನೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್ಥಿಕ ಗಣತಿ ಸಿಬ್ಬಂದಿ ಮಾಹಿತಿ ಸಂಗ್ರಹಿಸುವ ಭಾಗದಲ್ಲಿ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆ ಸಿಬ್ಬಂದಿಯಿಂದ ಸೂಕ್ತ ಭದ್ರತೆ ಒದಗಿಸಲಾಗುವುದು

-ಕೆ.ಪರಶುರಾಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.