ಪರಿಸರ ಸಚಿವಾಲಯ
ನವದೆಹಲಿ: ಬೆಂಗಳೂರಿನ ದೇವಿಕಾರಾಣಿ–ರೋರಿಚ್ ಎಸ್ಟೇಟ್‌ನಲ್ಲಿ ನಿಯಮಬಾಹಿರವಾಗಿ ಪರಿಸರ ಪ್ರವಾಸೋದ್ಯಮ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಆರೋಪದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ನಿರ್ದೇಶನ ನೀಡಿದೆ.
ಅರಣ್ಯ ಸಂರಕ್ಷಣಾ ಕಾಯ್ದೆ– 1980 ಉಲ್ಲಂಘಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಅವರು ಸಚಿವಾಲಯಕ್ಕೆ ಜೂನ್ 31ರಂದು ದೂರು ನೀಡಿದ್ದರು.
‘ರೋರಿಚ್ ಎಸ್ಟೇಟ್‌ನಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಅನುಷ್ಠಾನಗೊಳಿಸಲು ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ₹99 ಕೋಟಿ ಮಂಜೂರು ಮಾಡಿದೆ. ಈ ಯೋಜನೆಯಡಿ ಸಂದರ್ಶಕರ ಪಾರ್ಕಿಂಗ್, ಸಫಾರಿ ಪಾರ್ಕಿಂಗ್, ಕೆಫೆಟೇರಿಯಾ, ಮಾಹಿತಿ ಕೇಂದ್ರ, ಓವರ್ ಬ್ರಿಡ್ಜ್, ಕಾಟೇಜ್‌ಗಳು, ಗಾಲ್ಫ್ ಕೋರ್ಟ್, ಬಯಲು ರಂಗ ಮಂದಿರ, ಜಿಪ್ ಲೈನ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇಲಾಖೆ ಯೋಜಿಸಿದೆ. ತ್ವರಿತ ನಗರೀಕರಣದಿಂದ ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕಡಿಮೆಯಾಗುತ್ತಿದೆ. ಈ ಯೋಜನೆಗೆ ಒಪ್ಪಿಗೆ ಕೊಟ್ಟರೆ ಇನ್ನಷ್ಟು ಹಸಿರು ನಾಶವಾಗಲಿದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
‘ಬೆಂಗಳೂರು ನಗರವು ಈಗಾಗಲೇ ಮಾನವ-ಚಿರತೆ ಸಂಘರ್ಷಗಳಿಗೆ ಸಾಕ್ಷಿಯಾಗಿದೆ. ನಗರದ ದಕ್ಷಿಣ ಭಾಗದಲ್ಲಿ, ವಿಶೇಷವಾಗಿ ದೇವಿಕಾ ರಾಣಿ/ರೋರಿಚ್ ಎಸ್ಟೇಟ್ ಸುತ್ತಮುತ್ತ ಆನೆಗಳು ಇವೆ. ಈ ಯೋಜನೆ ಜಾರಿಗೊಳಿಸಿದರೆ ಮಾನವ–ಪ್ರಾಣಿ ಸಂಘರ್ಷ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ, ಯೋಜನೆ ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಅವರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.