ADVERTISEMENT

Online Game|₹3,522 ಕೋಟಿ ವಂಚನೆ:ವಿನ್‌ಝೋ ಪ್ರೈವೆಟ್‌ ಲಿಮಿಟೆಡ್‌ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 23:30 IST
Last Updated 25 ಜನವರಿ 2026, 23:30 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ವಿನ್‌ಝೋ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯು ಆನ್‌ಲೈನ್‌ ಗೇಮ್‌ಗಳಲ್ಲಿ ಚಂದಾದಾರರಿಗೆ ವಂಚಿಸುವ ಮತ್ತು ಠೇವಣಿ ಹಿಂದಿರುಗಿಸದೇ ಇರುವ ಮೂಲಕ ₹3,522 ಕೋಟಿಯನ್ನು ಅಕ್ರಮವಾಗಿ ಗಳಿಸಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಹೇಳಿದೆ.

ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಇ.ಡಿಯು ಪ್ರಾಸಿಕ್ಯೂಷನ್‌ ದೂರನ್ನು ಸಲ್ಲಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ. 

ADVERTISEMENT

ವಿನ್‌ಝೋ ಕಂಪನಿಯು 100ಕ್ಕೂ ಹೆಚ್ಚು ಮೊಬೈಲ್‌ ಗೇಮಿಂಗ್‌ ಆ್ಯಪ್‌ಗಳನ್ನು ನಿರ್ವಹಣೆ ಮಾಡುತ್ತಿತ್ತು. ಇವೆಲ್ಲವೂ ನೈಜ ಹಣ ತೊಡಗಿಸಿ ಆಟವಾಡುವ ಗೇಮ್‌ಗಳಾಗಿದ್ದವು (ರಿಯಲ್‌ ಮನಿ ಗೇಮ್‌–ಆರ್‌ಎಂಜಿ). ಈ ಗೇಮ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ), ಬಾಟ್‌ ಮತ್ತು ಅಲ್ಗಾರಿದಮ್‌ಗಳನ್ನು ಬಳಸಿಕೊಳ್ಳುವುದಿಲ್ಲ ಎಂದು ಕಂಪನಿಯು ಘೋಷಿಸಿಕೊಂಡಿತ್ತು. ಆದರೆ ವಾಸ್ತವದಲ್ಲಿ ಎಲ್ಲ ಗೇಮ್‌ಗಳಲ್ಲೂ ಎಐ, ಬಾಟ್‌ ಮತ್ತು ಅಲ್ಗಾರಿದಮ್‌ಗಳನ್ನು ವಿಪರೀತ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿತ್ತು ಎಂದು ಇ.ಡಿ ವಿವರಿಸಿದೆ.

ಚಂದಾದಾರರು ತಾವು ಪರಸ್ಪರರ ವಿರುದ್ಧ ಆಟವಾಡುತ್ತಿದ್ದೇವೆ ಎಂದು ಹಣ ತೊಡಗಿಸುತ್ತಿದ್ದರು. ವಾಸ್ತವದಲ್ಲಿ ಎಐ ಅಥವಾ ಬಾಟ್‌ ಜತೆಗೆ ಆಟವಾಡುತ್ತಿದ್ದರು. ಇದು ವಂಚನೆಯ ಮೊದಲ ಹಂತ. ಈ ರೀತಿ ಎಐ ಅನ್ನು ಬಳಸಿಕೊಂಡೇ ಚಂದಾದಾರರಿಗೆ ₹734 ಕೋಟಿ ವಂಚಿಸಿರುವುದು ಕಂಪನಿಯ ಸೂಪರ್‌ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳ ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಆರಂಭದಲ್ಲಿ ಚಂದಾದಾರರಿಗೆ ಸುಲಭವಾಗಿ ಗೆಲುವು ದೊರೆಯುವಂತೆ ಮತ್ತು ಉತ್ತಮ ಮೊತ್ತದ ಬಹುಮಾನ ಬರುವಂತೆ ಗೇಮಿಂಗ್‌ ಅಲ್ಗಾರಿದಮ್‌ಗಳನ್ನು ಕಂಪನಿಯು ವಿನ್ಯಾಸ ಮಾಡಿತ್ತು. ಚಂದಾದಾರರು ಹೆಚ್ಚು ಹಣ ತೊಡಗಿಸುತ್ತಿದ್ದಂತೆ ಆಟವು ಕಠಿಣವಾಗುತ್ತಿತ್ತು. ಆ ಹಂತದಲ್ಲೂ ಚಂದಾದಾರರು ಗೆದ್ದರೆ, ಅವರ ಖಾತೆಗಳನ್ನು ಬ್ಲಾಕ್‌ ಮಾಡಲಾಗುತ್ತಿತ್ತು ಇಲ್ಲವೇ ಅವರು ಪೂರ್ತಿ ಹಣ ಪಡೆದುಕೊಳ್ಳದಂತೆ ನಿರ್ಬಂಧ ಹಾಕಲಾಗುತ್ತಿತ್ತು. ಕಡೆಗೆ ಹಣವನ್ನೂ ನೀಡದೆ, ಠೇವಣಿಯನ್ನೂ ವಾಪಸ್‌ ಮಾಡದೆ ಖಾತೆಯನ್ನು ರದ್ದು ಮಾಡಲಾಗುತ್ತಿತ್ತು. ಚಂದಾದಾರರ ಹಣ ಕಂಪನಿಯ ಬಳಿಯೇ ಉಳಿಯುತ್ತಿತ್ತು ಎಂದು ವಿವರಿಸಿದೆ.

ಈ ರೀತಿ 2021ರಿಂದ 2025ರ ಆಗಸ್ಟ್‌ವರೆಗೆ ವಿನ್‌ಝೋ ಕಂಪನಿಯು 25 ಕೋಟಿಗೂ ಹೆಚ್ಚು ಚಂದಾದಾರರಿಗೆ ವಂಚಿಸಿ, ಒಟ್ಟು ₹3,522 ಕೋಟಿ ಗಳಿಸಿದೆ. ಕಂಪನಿಯ ಪ್ರವರ್ತಕರು ಈ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದಾರೆ. ವಿದೇಶಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಮ್ಮ ಮಧ್ಯೆಯೇ ₹230 ಕೋಟಿಯನ್ನು ಸಾಲದ ರೂಪದಲ್ಲಿ ಹಂಚಿಕೊಂಡಿದ್ದಾರೆ. ಸಾಲು–ಸಾಲು ಹಣ ಅಕ್ರಮ ವರ್ಗಾವಣೆ ಕೃತ್ಯಗಳನ್ನು ಎಸಗಿದ್ದಾರೆ. ಇದರಲ್ಲಿ ಈಗಾಲೇ ₹690 ಕೋಟಿ ಮೊತ್ತದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.