ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ ‘ಭೂ ಒಡೆತನ ಯೋಜನೆ’ಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ನಿಗಮದ ಕಚೇರಿ ಸೇರಿ ಹಲವೆಡೆ ಶೋಧ ಕಾರ್ಯ ನಡೆಸಿದ್ದಾರೆ.
‘ಬೆಂಗಳೂರಿನಲ್ಲಿರುವ ನಿಗಮದ ಕೇಂದ್ರ ಕಚೇರಿ, ವಿಜಯಪುರ ಜಿಲ್ಲಾ ಕಚೇರಿ, ಅಧಿಕಾರಿಗಳ ಮನೆಗಳು ಸೇರಿ ಒಟ್ಟು ಎಂಟು ಕಡೆ ಇದೇ ಗುರುವಾರ ಮತ್ತು ಶುಕ್ರವಾರ ಶೋಧ ನಡೆಸಲಾಗಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.
‘ಭೂರಹಿತರಿಗೆ ಭೂಮಿ ಒದಗಿಸುವ ಸಲುವಾಗಿ ನಿಗಮವು ಭೂಮಿಯನ್ನು ಖರೀದಿಸಿದ್ದು, ಇದರಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಇವೆ. ಭೂಮಿಗೆ ದುಪ್ಪಟ್ಟು ಬೆಲೆ ನೀಡಿ ಖರೀದಿಸಲಾಗಿದೆ ಮತ್ತು ಅನರ್ಹರಿಗೆ ಭೂಮಿ ಹಂಚಿಕೆ ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ಭೂಮಿ ಪಡೆದ ಫಲಾನುಭವಿಗಳ ವಿವರಗಳನ್ನು ಆರ್‌ಟಿಸಿಯಲ್ಲಿ ನಮೂದಿಸಿಲ್ಲ. ಅಕ್ರಮದ ಭಾಗವಾಗಿಯೇ ಹೀಗೆ ಮಾಡಲಾಗಿದೆ ಎಂಬುದರ ಬಗ್ಗೆ ಶಂಕೆಗಳಿವೆ. ಹಣ ವರ್ಗಾವಣೆ, ಫಲಾನುಭವಿಗಳು, ಅರ್ಜಿಗಳಿಗೆ ಸಂಬಂಧಿಸಿದ ಕಡತಗಳನ್ನು ಶೋಧದ ವೇಳೆ ವಶಕ್ಕೆ ಪಡೆಯಲಾಗಿದೆ. ಹಲವು ವರ್ಷಗಳ ಕಡತಗಳೇ ಲಭ್ಯವಿಲ್ಲ. ಈ ಬಗ್ಗೆ ವಿವರಣೆ ಕೇಳಲಾಗಿದೆ’ ಎಂದು ತಿಳಿಸಿವೆ.
‘ಭೂಮಿ ಖರೀದಿ ನಡೆದ ವೇಳೆ ನಿಗಮದ ಹಣವು ಭೂಮಾಲೀಕರ ಖಾತೆಗೆ ವರ್ಗಾವಣೆ ಮಾಡಿ, ಆನಂತರ ನಿಗಮದ ಸಿಬ್ಬಂದಿಯ ಖಾತೆಗೆ ವರ್ಗಾವಣೆಯಾಗಿದೆ. ಇದಕ್ಕೆ ಸಂಬಂಧಿಸಿದ ಬ್ಯಾಂಕ್ ವಹಿವಾಟು ದಾಖಲೆಗಳು ದೊರೆತಿದ್ದು, ತನಿಖೆ ಮುಂದುವರೆಸಲಾಗಿದೆ’ ಎಂದು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.