ಬೆಂಗಳೂರು: ‘ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ನಿಮಗೆ ಹೇಳಿದ್ದು ಯಾರು’ ಎಂದು ಗೃಹಸಚಿವ ಜಿ.ಪರಮೇಶ್ವರ ಅವರು ಪ್ರಶ್ನಿಸಿದರು.
ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ರೀತಿಯ ಮಾಹಿತಿ ನಿಮಗೆ ಯಾರು ಕೊಡುತ್ತಾರೆ? ಇ.ಡಿಯವರು ತನಿಖೆ ನಡೆಸಿ ವರದಿ ನೀಡಲಿ. ಆಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಏಕೆ ಉತ್ತರ ನೀಡಬೇಕು’ ಎಂದರು.
ರನ್ಯಾ ರಾವ್ ಅವರಿಗೆ ಪರಮೇಶ್ವರ ಅವರು ಮದುವೆ ಉಡುಗೊರೆ ನೀಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ‘ಆ ಬಗ್ಗೆ ಅವರ ಬಳಿಯೇ ಕೇಳಿ. ನನ್ನನ್ನೇಕೆ ಕೇಳುತ್ತೀರಿ’ ಎಂದರು.
‘ಈ ಪ್ರಕರಣದಲ್ಲಿ ಇ.ಡಿಯವರ ತನಿಖೆಗೆ ನಾನು ಸಹಕರಿಸುತ್ತೇನೆ. ನಾನು ರಾಜ್ಯದ ಗೃಹ ಸಚಿವ, ಕಾನೂನು ಪಾಲನೆ ಹೊಣೆಗಾರಿಕೆ ನನ್ನ ಮೇಲೆ ಇದೆ. ಹೀಗಿರುವಾಗ ತನಿಖೆಗೆ ಸಹಕಾರ ನೀಡುವುದಿಲ್ಲ ಎನ್ನಲಾಗುತ್ತದೆಯೇ? ಅವರು ತನಿಖೆ ನಡೆಸಲಿ. ಸತ್ಯಾಂಶ ಹೊರಗೆ ಬರಲಿ’ ಎಂದರು.
ಮದುವೆ ಉಡುಗೊರೆ:
ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು, ‘ನಾವೆಲ್ಲಾ ಪರಿಚಯಸ್ಥರ ಮದುವೆಯಲ್ಲಿ ಉಡುಗೊರೆ ನೀಡುತ್ತೇವೆ. ₹1 ನೀಡಬಹುದು, ₹100 ನೀಡಬಹುದು, ₹1 ಲಕ್ಷ ಅಥವಾ ₹ 10 ಲಕ್ಷ ನೀಡಬಹುದು. ಪರಮೇಶ್ವರ ಅವರೂ ಹಾಗೇ ಉಡುಗೊರೆ ನೀಡಿರಬಹುದು. ಇದರಲ್ಲಿ ವಿಶೇಷ ಏನೂ ಇಲ್ಲ, ತಪ್ಪೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.