ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ
ಬೆಂಗಳೂರು/ ಬಳ್ಳಾರಿ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹84 ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಕಾಂಗ್ರೆಸ್ ಸಂಸದ ಇ.ತುಕಾರಾಂ, ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ, ಕಂಪ್ಲಿ ಗಣೇಶ್ ಮತ್ತು ಎನ್.ಟಿ.ಶ್ರೀನಿವಾಸ್ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ.
ಬಳ್ಳಾರಿ, ವಿಜಯನಗರ ಮತ್ತು ಬೆಂಗಳೂರು ಸೇರಿ ಒಟ್ಟು 12 ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆಯೇ ಏಕಕಾಲಕ್ಕೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ತಡರಾತ್ರಿಯೂ ಶೋಧ ಮುಂದುವರೆಸಿದ್ದರು. ನಾಗೇಂದ್ರ ಮತ್ತು ಶ್ರೀನಿವಾಸ್ ಹೊರತುಪಡಿಸಿ ಉಳಿದವರು ತಮ್ಮ ಮನೆಯಲ್ಲೇ ಇದ್ದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಶಾಸಕರ ಭವನದ 4ನೇ ಬ್ಲಾಕ್‌ನಲ್ಲಿ ನಾಗೇಂದ್ರ ಅವರಿಗೆ ಹಂಚಿಕೆ ಮಾಡಲಾಗಿರುವ ಕೊಠಡಿಯಲ್ಲೂ ಒಂದು ತಂಡ ಶೋಧ ಕಾರ್ಯ ನಡೆಸಿದೆ.
ನಿಗಮದ ಲೆಕ್ಕಾಧಿಕಾರಿ ಪಿ.ಚಂದ್ರಶೇಖರನ್ ಅವರು 2024ರ ಮೇ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಬರೆದಿದ್ದ ಪತ್ರದಲ್ಲಿ, ‘ಮೇಲಧಿಕಾರಿಗಳ ಸೂಚನೆಯಂತೆ ಹಣವನ್ನು ಅಕ್ರಮ ವರ್ಗಾವಣೆ ಮಾಡಲಾಗಿದೆ’ ಎಂದು ಬರೆದಿದ್ದರು. ಸಿಬಿಐ ಬರೆದಿದ್ದ ಪತ್ರದ ಆಧಾರದಲ್ಲಿ ತನಿಖೆ ಆರಂಭಿಸಿದ್ದ ಇ.ಡಿಯು, ‘ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ.ನಾಗೇಂದ್ರ ಅವರ ಆಣತಿಯಂತೆ ಈ ಅಕ್ರಮ ನಡೆದಿದೆ’ ಎಂದು ಹೇಳಿತ್ತು.
ತನಿಖೆಯ ವೇಳೆ ಬಿ.ನಾಗೇಂದ್ರ ಅವರ ಆಪ್ತ ವಿಜಯ್ ಕುಮಾರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಅವರ ಡೈರಿ ಮತ್ತು ಮೊಬೈಲ್‌ನಲ್ಲಿ ಇದ್ದ ಮಾಹಿತಿಯನ್ನು ಕಲೆಹಾಕಿದ್ದ ತನಿಖಾಧಿಕಾರಿಗಳು, ಲೋಕಸಭಾ ಚುನಾವಣೆಯಲ್ಲಿ ಇ.ತುಕಾರಾಂ ಪರವಾಗಿ ಮತದಾರರಿಗೆ ಹಂಚಲು ಹಣ ವೆಚ್ಚ ಮಾಡಿದ್ದನ್ನು ಪತ್ತೆ ಮಾಡಿದ್ದರು.
‘ಇ.ತುಕಾರಾಂ ಅವರ ಮನೆಗೆ ದಾಳಿ ನಡೆಸಿದಾಗ, ಅವರಿನ್ನೂ ನಿದ್ದೆಯಲ್ಲಿದ್ದರು. ಅವರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮನೆಯಲ್ಲಿದ್ದ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಅವುಗಳನ್ನು ಪ್ರತಿ ಮಾಡಿಕೊಂಡರು’ ಎಂದು ಮೂಲಗಳು ತಿಳಿಸಿವೆ.
‘ವಿಜಯ್ ಕುಮಾರ್ ಅವರ ಡೈರಿಯಲ್ಲಿದ್ದ ವಿವರಗಳನ್ನು ಆಧಾರವಾಗಿ ಇರಿಸಿಕೊಂಡು ಶಾಸಕರು ಮತ್ತು ಆಪ್ತರನ್ನು ಪ್ರಶ್ನಿಸಲಾಗಿದೆ. ಮಾದರಿ ನೀತಿ ಸಂಹಿತೆ ಮಧ್ಯೆಯೇ ಹಣವನ್ನು ಹೇಗೆ ತಲುಪಿಸಲಾಗಿತ್ತು? ಹಣ ಮತ್ತು ಚಿನ್ನ ತಲುಪಿಸಿದ್ದ ಹವಾಲಾ ಮಂದಿಯೊಂದಿಗಿನ ನಿಮ್ಮ ಸಂಬಂಧ ಏನು? ಯಾರ ಮೂಲಕ ಮತದಾರರಿಗೆ ಹಣ ತಲುಪಿಸಿದ್ದೀರಿ ಎಂಬ ವಿವರ ಕೇಳಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ವಿಚಾರಣೆ ವೇಳೆ ನೀಡಿದ ವಿವರಗಳನ್ನು ಆಧರಿಸಿ, ಇನ್ನಷ್ಟು ಸ್ಥಳಗಳಿಗೆ ಇ.ಡಿ ಅಧಿಕಾರಿಗಳು ಭೇಟಿ ನೀಡಿದರು. ಬಳ್ಳಾರಿಯ ರಿಯಲ್ ಎಸ್ಟೇಟ್ ಕಚೇರಿ, ಚಿನ್ನಾಭರಣಗಳ ಅಂಗಡಿಯೊಂದಕ್ಕೂ ಇ.ಡಿ ಅಧಿಕಾರಿಗಳ ಒಂದು ತಂಡ ಭೇಟಿ ನೀಡಿ ವಿಚಾರಣೆ ನಡೆಸಿದೆ. ಹಣ ಯಾರಿಂದ ಯಾರಿಗೆ ತಲುಪಿತು ಎಂಬುದರ ನಿಖರ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪರಿಶೀಲನೆ ದೊರೆತಿವೆ’ ಎಂದು ತಿಳಿಸಿವೆ.
‘ಇ.ಡಿ ಅಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೇನೆ’ ಎಂದು ತುಕಾರಾಂ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.
ನಾವು ಯಾವುದೇ ರೀತಿಯ ಕಾನೂನು ಉಲ್ಲಂಘನೆಯನ್ನು ಬೆಂಬಲಿಸುವುದಿಲ್ಲ. ಕಾನೂನಿನ ಜಾರಿಗೂ ಅಡ್ಡಿಪಡಿಸುವುದಿಲ್ಲ. ಅವರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿಸಿದ್ದರಾಮಯ್ಯ ಮುಖ್ಯಮಂತ್ರಿ
ನಮ್ಮ ಮುಖಂಡರು ಯಾವುದೇ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿಲ್ಲ. ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದ ಹಣದಲ್ಲಿ ಶೇ 90ರಷ್ಟನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಈ ಹಗರಣದ ಹಣ ಲೋಕಸಭಾ ಚುನಾವಣೆಯಲ್ಲಿ ಬಳಕೆಯಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಬಡವರ ಹಣ ತಿಂದ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕುಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ಲೆಕ್ಕದ ಪುಸ್ತಕದಲ್ಲಿ ಮತ್ತಷ್ಟು ವಿವರ
‘ಬಿ.ನಾಗೇಂದ್ರ ಅವರ ಆಪ್ತ ಗೋವರ್ಧನ್ ರೆಡ್ಡಿ ಅವರ ಮನೆಯಲ್ಲಿ ಒಂದು ಲೆಕ್ಕದ ಪುಸ್ತಕ ದೊರೆತಿದ್ದು ವಿವಿಧೆಡೆಗೆ ಹಣ ಕಳುಹಿಸಿದ್ದರ ಸಂಬಂಧ ದಿನಾಂಕ ಮತ್ತು ಸ್ಥಳಗಳ ಮಾಹಿತಿ ಅದರಲ್ಲಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ. ‘ಆ ಲೆಕ್ಕದ ಪುಸ್ತಕದಲ್ಲಿ ಹಲವು ತಿಂಗಳ ಅವಧಿಯಲ್ಲಿ ನಡೆಸಿದ ಹಣಕಾಸು ವ್ಯವಹಾರದ ವಿವರಗಳಿವೆ. ವಿವಿಧ ಮಂದಿಗೆ ಕಳುಹಿಸಿದ ಹಣ ಮೊತ್ತ ದಿನಾಂಕದ ವಿವರ ಅದರಲ್ಲಿದೆ. ಲೋಕಸಭಾ ಚುನಾವಣೆಯ ಮತದಾನದ ದಿನಕ್ಕೂ ವಾರದ ಮೊದಲು ಹೆಚ್ಚು ಹಣ ಕಳುಹಿಸಿರುವ ಬಗ್ಗೆ ಉಲ್ಲೇಖವಿದೆ. ಈ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ’ ಎಂದು ವಿವರಿಸಿವೆ.
ಆರೋಪ ಪಟ್ಟಿಯಲ್ಲೇನಿತ್ತು?
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ, ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 2024ರ ಅಕ್ಟೋಬರ್‌ನಲ್ಲಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಹಣವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿತ್ತು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ, ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರ ಆಣತಿಯಂತೆ ಕಾಂಗ್ರೆಸ್‌ನವರಾದ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿಯ ಶಾಸಕ ಗಣೇಶ್ ಮತ್ತು ಕೂಡ್ಲಿಗಿಯ ಶಾಸಕ ಎನ್.ಟಿ.ಶ್ರೀನಿವಾಸಗೆ ಹಣ ನೀಡಲಾಗಿತ್ತು
l ನಿಗಮದ ಖಾತೆಗಳಿಂದ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ ಹಣದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ 7 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಕಾಂಗ್ರೆಸ್‌ನ ಮೂವರು ಶಾಸಕರ ಮೂಲಕ ₹14.80 ಕೋಟಿ ಹಂಚಲಾಗಿದೆ
l ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇ.ತುಕಾರಾಂ ಅವರ ಪರವಾಗಿ ಮತ ಚಲಾಯಿಸುವಂತೆ ಓಲೈಸಲು 7.26 ಲಕ್ಷ ಮತದಾರರಿಗೆ ತಲಾ ₹200 ಹಂಚಲಾಗಿದೆ
l ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಒಟ್ಟು ₹72 ಲಕ್ಷ ಹಂಚಲಾಗಿದೆ. ಮತದಾನದ ವೇಳೆ ಮತಗಟ್ಟೆಯಲ್ಲಿ ಕೆಲಸ ನಿರ್ವಹಿಸಿದ ಕಾರ್ಯಕರ್ತರಿಗೆ ತಲಾ ₹10,000 ವೆಚ್ಚ ಮಾಡಲಾಗಿದೆ
l ಚುನಾವಣೆ ವೇಳೆ ಮದ್ಯ ಖರೀದಿಗೆ ₹4 ಕೋಟಿ ಮತ್ತು ಓಡಾಟಕ್ಕೆ ಸುಮಾರು ₹50 ಲಕ್ಷ ವೆಚ್ಚ ಮಾಡಲಾಗಿದೆ
‘ಒಗ್ಗಟ್ಟು ಒಡೆಯಲು ಯತ್ನ’
ಕಾಂಗ್ರೆಸ್ ಶಾಸಕರ ಒಗ್ಗಟ್ಟು ಒಡೆಯಲು ನಮ್ಮ ಶಾಸಕರನ್ನೇ ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಮಾಡುತ್ತಿದೆ. ಒಂದು ವರ್ಷದ ಹಿಂದಿನ ಚುನಾವಣೆಯಲ್ಲಿ ನಡೆದಿದ್ದನ್ನು ಈಗ ಕೈಗೆತ್ತಿಕೊಂಡ ಇ.ಡಿ. ದಾಳಿಯ ನೆಪದಲ್ಲಿ ಕಾಂಗ್ರೆಸ್ ಶಾಸಕರಿಗೆ ತೊಂದರೆ ಕೊಡುತ್ತಿದೆ. ಒಂದೇ ಪಕ್ಷದವರನ್ನು ಗುರಿ ಮಾಡಿದರೆ ಶಾಸಕರಲ್ಲಿ ಒಡಕು ಮೂಡಿ ಎದುರಿನವರಿಗೆ ಅನುಕೂಲ ಆಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ. ಅವರು ಎಷ್ಟೇ ಕಿರುಕುಳ ಕೊಟ್ಟರೂ ನಾವು ಒಗ್ಗಟ್ಟಾಗಿ ಇರುತ್ತೇವೆ.
–ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.