ADVERTISEMENT

ಟಿಡಿಆರ್‌ ವಂಚನೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಭಾಗಿ: ಇ.ಡಿ

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:20 IST
Last Updated 23 ಮೇ 2025, 16:20 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಸ್ವತ್ತುಗಳಿಗೆ ಪ್ರತಿಯಾಗಿ ನೀಡಲಾಗಿದ್ದ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರ (ಟಿಡಿಆರ್‌ ಪ್ರಮಾಣ ಪತ್ರ) ವಂಚನೆ ಪ್ರಕರಣದಲ್ಲಿ ಬಿಬಿಎಂಪಿಯ ಉನ್ನತ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

ಈ ಸಂಬಂಧ ವಾಲ್‌ಮಾರ್ಕ್‌ ರಿಯಾಲ್ಟಿ ಹೋಲ್ಡಿಂಗ್ಸ್‌ ಕಂಪನಿಗೆ ಸೇರಿದ ಒಂಬತ್ತು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಗುರುವಾರ ಮತ್ತು ಶುಕ್ರವಾರ ಶೋಧ ನಡೆಸಿದ್ದರು.

ADVERTISEMENT

2009–2015ರ ಅವಧಿಯಲ್ಲಿ ಹೊರಮಾವು ಮತ್ತು ಟಿ.ಸಿ.ಪಾಳ್ಯ ರಸ್ತೆ ವಿಸ್ತರಣೆಗಾಗಿ ಬಿಬಿಎಂಪಿಯು ಜಮೀನು ಮತ್ತು ವಸತಿ ಕಟ್ಟಡಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಆದರೆ 1989ರಲ್ಲೇ ಈ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗಿತ್ತು ಎಂದು ಇ.ಡಿ ಮೂಲಗಳು ತಿಳಿಸಿವೆ.

ಈ ಸಂಗತಿಯನ್ನು ಮರೆಮಾಚಿ, ವಾಲ್‌ಮಾರ್ಕ್‌ ರಿಯಾಲ್ಟಿ ಹೋಲ್ಡಿಂಗ್ಸ್‌ ಮತ್ತು ಕೆಲ ಮಧ್ಯವರ್ತಿಗಳು ಜಮೀನಿನ ಮೂಲ ಮಾಲೀಕರಿಂದ ಟಿಡಿಆರ್‌ ಕೋರಿ ಬಿಬಿಎಂಪಿಗೆ ಅರ್ಜಿ ಹಾಕಿಸಿದ್ದರು. ಬಿಬಿಎಂಪಿ ಅಧಿಕಾರಿಗಳಿಗೆ ಇದು ಗೊತ್ತಿದ್ದೂ, ₹27.68 ಕೋಟಿ ಮೊತ್ತದ ಟಿಡಿಆರ್‌ ನೀಡಿದ್ದರು ಎಂದು ಇ.ಡಿ ವಿವರಿಸಿದೆ.

ಮೂಲ ಮಾಲೀಕರಿಂದ ಟಿಡಿಆರ್‌ ಅನ್ನು ಜಿಪಿಎ ಮಾಡಿಸಿಕೊಂಡಿದ್ದ ವಾಲ್‌ಮಾರ್ಕ್‌ ಕಂಪನಿಯು, ಮಧ್ಯವರ್ತಿಗಳ ಮೂಲಕ ಅವನ್ನು 12 ಬೇರೆ ಬೇರೆ ಕಂಪನಿಗಳಿಗೆ ಮಾರಾಟ ಮಾಡಿತ್ತು. ಇದರಲ್ಲಿ ಬಿಬಿಎಂಪಿ ಅಧಿಕಾರಿಗಳೂ ನೇರವಾಗಿ ಭಾಗಿಯಾಗಿದ್ದರು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ತಿಳಿಸಿದೆ.

ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ರಾಜ್ಯ ಪೊಲೀಸ್‌ ಇಲಾಖೆಗಳು ಹಲವು ಪ್ರಕರಣಗಳು ದಾಖಲಿಸಿಕೊಂಡು ತನಿಖೆ ನಡೆಸುತ್ತಿವೆ. ಆ ವಿವರಗಳನ್ನೂ ಕಲೆಹಾಕಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.