ರಸ್ತೆ, ಉದ್ಯಾನ, ಆಟದ ಮೈದಾನದಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ಕೆಲಸ ಸಮರ್ಪಕವಾಗಿ ಆಗದಿರುವ ಬಗ್ಗೆ ಹೈಕೋರ್ಟ್ ವ್ಯಕ್ತಪಡಿಸಿರುವ ಕಳವಳವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಇಂತಹ ಪ್ರಾರ್ಥನಾ ಕೇಂದ್ರಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ 2009ರಲ್ಲಿಯೇ ತೀರ್ಪು ನೀಡಿತ್ತು. ಆ ತೀರ್ಪು ಪ್ರಕಟವಾಗಿ ಹತ್ತು ವರ್ಷ ಕಳೆದರೂ ಅನಧಿಕೃತ ನಿರ್ಮಾಣಗಳನ್ನು ಗುರುತಿಸುವ ಕೆಲಸವೇ ಸರಿಯಾಗಿ ನಡೆದಿಲ್ಲ.
ಈ ಹಿನ್ನೆಲೆಯಲ್ಲಿ, ‘ದೇವರ ಹೆಸರಿನಲ್ಲಿ ನಡೆಯುವ ಅಕ್ರಮವನ್ನು ತಡೆಯಲು ನಿಮಗೆ ಇಚ್ಛೆಯಿಲ್ಲವೇ’ ಎಂದು ಪ್ರಶ್ನಿಸಿರುವ ಹೈಕೋರ್ಟ್, ಸಾಕಷ್ಟು ಕಾಲಾವಕಾಶವಿದ್ದರೂ ಅಕ್ರಮವಾಗಿ ನಿರ್ಮಾಣಗೊಂಡಿರುವ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಅಕ್ರಮ ನಿರ್ಮಾಣಗಳಿಗೆ ಸಂಬಂಧಿಸಿದಂತೆ ಫೆ. 4ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಅಕ್ರಮವಾಗಿ ತಲೆ ಎತ್ತಿರುವ ಆರಾಧನಾ ಕೇಂದ್ರಗಳನ್ನು ತೆರವುಗೊಳಿಸಲು ಇಲ್ಲವೇ ಸ್ಥಳಾಂತರಿಸಲು ವಿಫಲವಾಗುವ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದ ಮುಂದೆ ಸ್ವತಃ ಹಾಜರಾಗಬೇಕಾದೀತು ಎಂದುಈ ಮೊದಲು ಸುಪ್ರೀಂ ಕೋರ್ಟ್ ಕೂಡ ಎಚ್ಚರಿಸಿತ್ತು.
ಸಾರ್ವಜನಿಕ ಸ್ಥಳಗಳು ಧಾರ್ಮಿಕ ಕೇಂದ್ರಗಳಾಗಿ ಪರಿವರ್ತನೆ ಆಗುವುದರಿಂದ ಸಂಚಾರ ದಟ್ಟಣೆಯ ಜೊತೆಗೆ ಜನರ ಚಲನವಲನಕ್ಕೆ ತೊಂದರೆಯಾಗುತ್ತದೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಈ ಎಚ್ಚರಿಕೆಯ ನಂತರವೂ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋರ್ಟ್ ತೀರ್ಪನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಆಲಸ್ಯ ಮನೋಭಾವ ತೋರುತ್ತಲೇ ಇದ್ದಾರೆ. ಕರ್ನಾಟಕದಲ್ಲಂತೂ ಅಕ್ರಮ ನಿರ್ಮಾಣಗಳನ್ನು ಗುರುತಿಸುವ ಕೆಲಸದ ಬಗ್ಗೆ ಆಸಕ್ತಿಯೇ ವಹಿಸಿದಂತೆ ಇಲ್ಲ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿರುವ ಹೈಕೋರ್ಟ್, ಸರ್ಕಾರದ ನಿರ್ಲಕ್ಷ್ಯಕ್ಕೆ ತಪರಾಕಿ ನೀಡಿದೆ.
ಅನಧಿಕೃತವಾಗಿ ನಿರ್ಮಾಣವಾಗಿರುವ ಮಂದಿರ, ಮಸೀದಿ ಅಥವಾ ಚರ್ಚುಗಳನ್ನು ಗುರುತಿಸುವುದು ಅಥವಾ ತೆರವುಗೊಳಿಸುವುದು ಅಧಿಕಾರಿಗಳಿಗೆ ಏಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಸರಳವಾದುದಲ್ಲ. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕಿಂತಲೂ ಹೆಚ್ಚಾಗಿ, ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವ ಮನೋಭಾವವೇ ಎದ್ದುಕಾಣುತ್ತದೆ.
ಪ್ರಾರ್ಥನಾ ಸ್ಥಳಗಳು ಸಮುದಾಯಗಳ ನಂಬಿಕೆ– ಭಾವುಕತೆಯ ಕೇಂದ್ರಗಳೂ ಆಗಿರುವುದರಿಂದ ಅವುಗಳಿಗೆ ಕೈಹಾಕಲು ಅಧಿಕಾರಿಗಳು ಹಿಂಜರಿದಿರಬಹುದು. ಬಹುಪಾಲು ಅಕ್ರಮ ನಿರ್ಮಾಣಗಳ ಹಿಂದೆ ಸ್ಥಳೀಯ ಪುಢಾರಿಗಳು ಇರುವುದರಿಂದ, ಆ ಕೇಂದ್ರಗಳನ್ನು ತೆರವುಗೊಳಿಸಲು ಕೈ ಹಚ್ಚುವುದು ಎಂದರೆ ಹುತ್ತಕ್ಕೆ ಕೈ ಹಾಕಿದಂತೆ ಎನ್ನುವ ಭಾವನೆ ಇದೆ. ಅದಕ್ಕಾಗಿಯೇ ಸಮಸ್ಯೆ ಪರಿಹಾರ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬರುತ್ತಿದ್ದಾರೆ. ಈ ಹಿಂಜರಿಕೆಯನ್ನು ದುರುಪಯೋಗಪಡಿಸಿಕೊಂಡು ಕೆಲವು ಕಡೆ ರಾತ್ರೋರಾತ್ರಿ ದೇವರುಗಳು ಉದ್ಭವವಾಗಿವೆ.
ಪಾದಚಾರಿ ಮಾರ್ಗಗಳಲ್ಲಿ, ಸಾರ್ವಜನಿಕರ ವಾಯುವಿಹಾರ ಸ್ಥಳಗಳಲ್ಲಿ ಮಂದಿರ–ಮಸೀದಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿವೆ. ಇವು ಸರ್ಕಾರದ ಆಸ್ತಿಯ ಅತಿಕ್ರಮಣ ಮಾಡುವುದರ ಜೊತೆಗೆ, ಸುಗಮ ಸಂಚಾರಕ್ಕೆ ಅಡಚಣೆಯನ್ನೂ ಉಂಟುಮಾಡುತ್ತವೆ. ಜನಸಂದಣಿ ಹಾಗೂ ವಾಹನದಟ್ಟಣೆಯು ಅಪಘಾತಗಳಿಗೆ ಕಾರಣವಾಗಿರುವುದೂ ಇದೆ. ಸಾರ್ವಜನಿಕರ ಸಂಚಾರಕ್ಕೆ ಆಗುವ ಅಡೆತಡೆಗಳನ್ನು ನಿವಾರಿಸುವುದು ಸರ್ಕಾರದ ಕರ್ತವ್ಯವಾದ್ದರಿಂದ, ಅಕ್ರಮ ನಿರ್ಮಾಣಗಳ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯ. ಅತ್ಯಂತ ಸೂಕ್ಷ್ಮವಾದ ಈ ಕೆಲಸವನ್ನು ಅವರು ಮಧ್ಯಮಮಾರ್ಗವನ್ನೂ ಅನುಸರಿಸಿ ಮಾಡಬಹುದು.
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮನವೊಲಿಸುವ ಮೂಲಕ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಬಹುದು. ಧಾರ್ಮಿಕತೆಯ ಹೆಸರಲ್ಲಿ ಅಕ್ರಮ ನಿರ್ಮಾಣವು ದೇವರಿಗೆ ತೋರುವ ಅಗೌರವ. ಇದನ್ನು ಸಾರ್ವಜನಿಕರಿಗೆ ಅರ್ಥ ಮಾಡಿಸುವ ಕೆಲಸವನ್ನೂ ಮಾಡಬೇಕು. ಅಕ್ರಮ ನಿರ್ಮಾಣಗಳ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟವಾಗಿರುವುದರಿಂದ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಇಚ್ಛಾಶಕ್ತಿಯನ್ನುಅಧಿಕಾರಿಗಳು ತೋರಲೇಬೇಕಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ವ್ಯಕ್ತಪಡಿಸಿರುವ ಆತಂಕ ಹಾಗೂ ಸೂಚನೆ ಸರ್ಕಾರದ ಕಣ್ಣು ತೆರೆಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.