ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಪೂರ್ವಪ್ರಾಥಮಿಕ ಶಾಲಾ ಮಕ್ಕಳಿಗೂ ‘ಆಟ ಆಧಾರಿತ ಗಣಿತ ಪಠ್ಯಕ್ರಮ’ ಪರಿಚಯಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಬುನಾದಿ ಹಂತದಿಂದಲೇ ಕಲಿಕೆ ಮತ್ತು ಬೋಧನೆಯ ಗುಣಮಟ್ಟ ಸುಧಾರಿಸಲು, ನಾವೀನ್ಯತೆಗೆ ಒತ್ತು ನೀಡಲು ಶಿಕ್ಷಣ ಇಲಾಖೆ ‘ಜೆ–ಪಿಎಎಲ್ ದಕ್ಷಿಣ ಏಷ್ಯಾ’ ಜತೆ ಬುಧವಾರ ಒಪ್ಪಂದ ಮಾಡಿಕೊಂಡಿತು.
ಒಪ್ಪಂದದ ನಂತರ ಮಾತನಾಡಿದ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್, ಜಾಗತಿಕ ಸಂಶೋಧನಾ ಕೇಂದ್ರವಾಗಿರುವ ಜೆ–ಪಿಎಎಲ್ 900ಕ್ಕೂ ಹೆಚ್ಚು ಸಂಯೋಜಿತ ಸಂಶೋಧಕರನ್ನು ಒಳಗೊಂಡಿದೆ. 2003ರಿಂದಲೂ ಶಿಕ್ಷಣ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ. ಇಂತಹ ಸಂಸ್ಥೆಯ ಕಲಿಕಾ ಪ್ರಯೋಗಾಲಯ, ತಾಂತ್ರಿಕ ಪರಿಣತರನ್ನು ಬಳಸಿಕೊಂಡು ಸರ್ಕಾರಿ ಶಾಲಾ ಮಕ್ಕಳ ಕಲಿಕೆಯನ್ನು ಬಲಪಡಿಸಲಾಗುವುದು ಎಂದರು.
ಒಪ್ಪಂದದ ಪ್ರಕಾರ ಮೊದಲ ಹಂತದಲ್ಲಿ ಪೂರ್ವಪ್ರಾಥಮಿಕ ಶಾಲೆಯ ಮಕ್ಕಳ ಗಣಿತ ಕಲಿಕೆಗೆ ‘ಚಿಲಿ-ಪಿಲಿ’ ಪರಿಚಯ, 6, 7 ಮತ್ತು 8ನೇ ತರಗತಿಗಳಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆಗೆ ‘ಮರು ಸಿಂಚನ’ ಹಾಗೂ 3ರಿಂದ 8ನೇ ತಗರತಿಯ ಮಕ್ಕಳಿಗೆ ‘ಗಣಿತ–ಗಣಕ’ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೆರವು ದೊರೆಯಲಿದೆ.
ಸರ್ಕಾರಿ ಶಾಲೆಯ ಶಿಕ್ಷಕರಿಗೆ ವಾರಕ್ಕೆ ಒಂದು ದಿನ ಕನಿಷ್ಠ 45 ನಿಮಿಷ ಮೊಬೈಲ್ ಫೋನ್‌ಗಳ ಮೂಲಕ ವಿಶೇಷ ತರಗತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಕಲ್ಪನೆಗಳನ್ನು ವಿವರಿಸಲು, ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಸಂಸ್ಥೆಯ ಪ್ರತಿನಿಧಿಗಳು ನೆರವಾಗಲಿದ್ದಾರೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಶಾಲೆಗಳಲ್ಲಿ ಬೋಧನೆ-ಕಲಿಕಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ ಅಗತ್ಯವಾಗಿದೆ. ಜೆ-ಪಿಎಎಲ್ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಉಚಿತವಾಗಿ ನೆರವಾಗುತ್ತಿದೆ. ಮೊದಲ ಹಂತದಲ್ಲಿ 9,000 ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಿದೆ ಎಂದರು.
ಜೆ–ಪಿಎಎಲ್ ಸಂಸ್ಥೆಯ ಜಾಗತಿಕ ಕಾರ್ಯನಿರ್ವಾಹಕ ನಿರ್ದೇಶಕ ಇಕ್ಬಾಲ್ ಧಲಿವಾಲ್, ನಿರ್ದೇಶಕಿ ಶೋಭಿನಿ ಮುಖರ್ಜಿ, ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕ ಕೆ.ಎನ್. ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.