ADVERTISEMENT

ಸ್ನಾತಕೋತ್ತರ ಪದವಿ ಪಡೆದ ಗಿರಿಜನ ಯುವತಿ

ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಅಂಗವಿಕಲೆ ಸೌಜನ್ಯ

ಎಚ್.ಎಸ್.ಸಚ್ಚಿತ್
Published 28 ಜುಲೈ 2019, 20:01 IST
Last Updated 28 ಜುಲೈ 2019, 20:01 IST
ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಪ್ರಥಮ ಸ್ನಾತಕೋತ್ತರ ಪದವೀಧರೆ ಪಿ.ವಿ.ಸೃಜನಾ
ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಪ್ರಥಮ ಸ್ನಾತಕೋತ್ತರ ಪದವೀಧರೆ ಪಿ.ವಿ.ಸೃಜನಾ   

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಅಂಗವಿಕಲ ಯುವತಿ ಪಿ.ವಿ.ಸೃಜನಾ, ಉನ್ನತ ಶಿಕ್ಷಣದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ‌2018–19ನೇ ಸಾಲಿನಲ್ಲಿ ಶೇ 74 ಅಂಕಗಳೊಂದಿಗೆ ಎಂ.ಕಾಂನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದೈಹಿಕವಾಗಿ ಕುಬ್ಜರಾಗಿದ್ದರೂ, ಮಾನಸಿಕವಾಗಿ ಕುಗ್ಗದೆ ಹಿಡಿದ ಛಲ ಪೂರ್ಣಗೊಳಿಸಿದ್ದಾರೆ.

ಜೇನುಕುರುಬ ಸಮಾಜದ ಅವರು ಈ ಸಾಧನೆ ಮಾಡಿದ ಈ ಕೇಂದ್ರದ ಪ್ರಥಮ ಯುವತಿ ಕೂಡ. ತಂದೆ ಎಂ.ಬಿ.ಪ್ರಭು, ತಾಯಿ ವೀಣಾ ಅವರು ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಳ್ಳುತ್ತಾರೆ.

ADVERTISEMENT

ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡು ಎರಡು ದಶಕಗಳಾಗಿವೆ. ಅರಣ್ಯದಿಂದ ಹೊರಬಂದ 1,880 ಗಿರಿಜನ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ನೀಡಿ ಸಮಾಜಮುಖಿಯಾಗಲು ಕೋಟ್ಯಂತರ ರೂಪಾಯಿ ವಿನಿಯೋಗಿಸಿದ್ದರೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದವರ ಸಂಖ್ಯೆ ಕಡಿಮೆ.

ಕೊಡಗಿನ ಬಾಳೆಕೋವು ಗಿರಿಜನ ಹಾಡಿಯಲ್ಲಿ ಜನಿಸಿದ ಸೃಜನಾ, ಪೋಷಕರೊಂದಿಗೆ 22 ವರ್ಷಗಳ ಹಿಂದೆ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರ ಸೇರಿದ್ದರು.

‘ಕುಬ್ಜತೆ ಸಮಸ್ಯೆ ಇರುವುದು ಬಾಲ್ಯದಲ್ಲಿ ನನಗೆ ತಿಳಿಯಲಿಲ್ಲ. ಹೈಸ್ಕೂಲಿಗೆ ಪ್ರವೇಶ ಪಡೆದ ಬಳಿಕ ಈ ಸಮಸ್ಯೆ ಅರಿವಿಗೆ ಬಂತು. ಈ ಹಂತದಲ್ಲಿ ಮಾನಸಿಕವಾಗಿ ಕುಸಿಯದೆ ಎಲ್ಲರೊಂದಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದೆ. ಯಾವುದೇ ಅಪಸ್ವರಕ್ಕೆ ಕಿವಿಗೊಡದೆ ಪಿಯುಸಿ ಮತ್ತು ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿದೆ. ಈಗ ಮತ್ತೊಂದು ಸಾಧನೆ ಮಾಡಿದ ಖುಷಿ ಇದೆ’ ಎಂದು ಸೃಜನಾ ಪ್ರತಿಕ್ರಿಯಿಸಿದರು.

‘ಗಿರಿಜನ ವಾಣಿಜ್ಯ ವಹಿವಾಟು’ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಇರಾದೆ ಹೊಂದಿದ್ದಾರೆ. ಇದಲ್ಲದೆ ವಾಣಿಜ್ಯ ತೆರಿಗೆ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದಾರೆ.

‘ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಉಚಿತ ಲ್ಯಾಪ್‌ಟಾಪ್ ನನಗೆ ಸಿಗಲಿಲ್ಲ. ಈ ಸಂಬಂಧ ಹಿಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಕೂಡ ಬರೆದು ಮನವಿ ಮಾಡಿದ್ದೆ. ಇಷ್ಟಾದರೂ ಲ್ಯಾಪ್‌ಟಾಪ್ ಸಿಗಲಿಲ್ಲ. ಈಗ ಸ್ನಾತಕೋತ್ತರ ಪದವಿ ಮುಗಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.