ADVERTISEMENT

ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ: ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:24 IST
Last Updated 11 ಸೆಪ್ಟೆಂಬರ್ 2019, 20:24 IST
ಎಸ್. ಸುರೇಶ್‌ ಕುಮಾರ್‌
ಎಸ್. ಸುರೇಶ್‌ ಕುಮಾರ್‌   

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿನ ವಿವಿಧ ಪ್ರಕರಣಗಳನ್ನು ವಿಭಾಗಿಸಿ, ಕಾಲಮಿತಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸಮಸ್ಯೆಗಳನ್ನು ಬಗೆಹರಿಸುವ ಕುರಿತಂತೆ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಸಚಿವ ಎಸ್‌. ಸುರೇಶ್ ಕುಮಾರ್ ಹೇಳಿದರು.

ಬುಧವಾರ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಗಳ ವಿಧಾನಪರಿಷತ್ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

‘ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ತೊಡಕಾದ ಕುರಿತಂತೆ ಶಾಸಕರು ನೀಡಿದ ಸಲಹೆಗಳನ್ನು ಆಲಿಸಿ, ಈ ಕುರಿತು ಕಾಯ್ದೆಗೆ ತಿದ್ದುಪಡಿ ತರುವ ಮೊದಲು ವಿಧಾನಪರಿಷತ್ತಿನ ಸದಸ್ಯರ ಸಭೆ ಕರೆದು ಚರ್ಚಿಸಲಾಗುವುದು. ಸಮಿತಿಯೊಂದನ್ನು ರಚಿಸಿ ತಿದ್ದುಪಡಿಗೆ ಸಂಬಂಧಿಸಿದಂತೆ ವರದಿಯೊಂದನ್ನು ಪಡೆಯಲಾಗುವುದು. ಕಳೆದ ಬಾರಿ ವಿಧಾನಮಂಡಲದ ಎರಡೂ ಸದನ
ಗಳಲ್ಲಿ ಧರಣಿ ಸಮಯದಲ್ಲಿ ಈ ಮಸೂದೆ ಅಂಗೀಕಾರ ಆಗಿತ್ತು. ಈ ಬಾರಿ ಮಂಡಿಸುವಾಗ ಸವಿಸ್ತಾರವಾಗಿ ಚರ್ಚೆಗೆ ಅವಕಾಶ ಕಲ್ಪಿಸಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ತರಲಾಗುವುದು’ ಎಂದರು.

ADVERTISEMENT

ಪಿಯು ಶಿಕ್ಷಣ: ‘ಪದವಿ ಪೂರ್ವ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು’ ಎಂದರು. ಶಿಕ್ಷಕರಿಗೆ ವೇತನ ವಿಳಂಬ, ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿ ಮಾಡುವ ಸಂಬಂಧದ ಕಡತಗಳಿಗೆ ಅಧಿಕಾರಿಗಳ ವಿಳಂಬ ನೀತಿ, ಶಾಲಾ ಫಲಿತಾಂಶ ಆಧಾರದಲ್ಲಿ ಶಾಲಾ ಶಿಕ್ಷಕರಿಗೆ ಕಿರುಕುಳ ನೀಡುವುದು, ಶಿಕ್ಷಕರಿಗೆ ಬೋಧನೇತರ ಕೆಲಸ ಹೇರುತ್ತಿರುವುದು, ಶಿಕ್ಷಕರು ಅಧಿಕಾರಿಗಳ ಮನೆ ಬಳಿ, ಬಿಇಒ ಕಚೇರಿಗಳ ಬಳಿ ಅಲೆದಾಡುವಂತಾಗಿರುವ ಪರಿಸ್ಥಿತಿ ಕುರಿತಂತೆ ಸದಸ್ಯರು ಸಚಿವರ ಗಮನ ಸೆಳೆದರು.

‘ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ, ಎಲ್ಲವನ್ನೂ ಒಂದೇ ಸಲಕ್ಕೆ ಪರಿಹಾರ ಮಾಡುವುದು ಕಷ್ಟಸಾಧ್ಯವೇ ಹೌದು. ಹಾಗಾಗಿ ಜ್ವಲಂತ ಸಮಸ್ಯೆಗಳ ಕುರಿತು ಸದ್ಯ ಗಮನ ಹರಿಸಿ ಕಾಲಮಿತಿಯಲ್ಲಿ ಉಳಿದ ಸಮಸ್ಯೆಗಳ ಕುರಿತು ಗಮನ ಹರಿಸಬಹುದು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಕಡ್ಡಾಯ ವರ್ಗಾವಣೆಗೊಂಡವರು ಮತ್ತೆ ಹಿಂದಿನ ಸ್ಥಳಕ್ಕೆ ನಿಯೋಜನೆ

ಈ ಬಾರಿ ಕಡ್ಡಾಯ ವರ್ಗಾವಣೆ ಆದವರನ್ನು ಮುಂದಿನ ಮಾರ್ಚ್‌ ವೇಳೆಗೆ ಈ ಹಿಂದಿನ ಸ್ಥಳದಲ್ಲೇ ನಿಯೋಜಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ಮೂಲಕ ಕಡ್ಡಾಯ ವರ್ಗಾವಣೆ ವಿರೋಧಿಸುತ್ತಿದ್ದ ಶಿಕ್ಷಕರಿಗೆ ಭಾಗಶಃ ಯಶಸ್ಸು ಲಭಿಸಿದೆ.

ಬುಧವಾರ ಇಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ವಿಧಾನ ಪರಿಷತ್‌ನ ಹಲವು ಸದಸ್ಯರು ಮಾಡಿದ ಒತ್ತಾಯಕ್ಕೆ ಸಮ್ಮತಿ ಸೂಚಿಸಿದರು ಹಾಗೂ ಮುಂದಿನ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲೇ ವರ್ಗಾವಣೆ ಪ್ರಕ್ರಿಯೆ ಕೊನೆಗೊಳಿಸಲಾಗುವುದು ಎಂದರು.

* ಶಿಕ್ಷಕರ ವರ್ಗಾವಣೆಯಲ್ಲಿ ಕ್ಯಾನ್ಸರ್‌ನಂತಹ ಪ್ರಕರಣಗಳಿದ್ದರೆ ನನ್ನ ಗಮನಕ್ಕೆ ತನ್ನಿ, ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ

-ಎಸ್‌. ಸುರೇಶ್‌ ಕುಮಾರ್‌ ಪ್ರಾಥಮಿಕ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.