ADVERTISEMENT

ಆಗಸ್ಟ್‌ 28, 29ರಂದು ಸಿಇಟಿ: ಪ್ರವೇಶ ಪರೀಕ್ಷೆ ಅಂಕ ಮಾತ್ರ ಪರಿಗಣನೆಗೆ -ಡಿಸಿಎಂ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 19:48 IST
Last Updated 8 ಜೂನ್ 2021, 19:48 IST
   

ಬೆಂಗಳೂರು: ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಪಡಿಸಿರುವುದರಿಂದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೊರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಮಂಗಳವಾರ ಚರ್ಚಿಸಿದ ನಂತರ ಮಾತನಾಡಿದ ಅವರು, ‘ಇದೇ 15ರಿಂದಲೇ ಆನ್‌ಲೈನ್ ನೋಂದಣಿ ಆರಂಭವಾಗಲಿದೆ. ಆಗಸ್ಟ್‌ 28, 29 ಸಿಇಟಿ, 30ರಂದು ಕನ್ನಡ ಪರೀಕ್ಷೆ (ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ) ನಡೆಯಲಿದೆ. ದ್ವಿತೀಯ ಪಿಯು (ವಿಜ್ಞಾನ) ಪಾಸಾದ ಎಲ್ಲ ವಿದ್ಯಾರ್ಥಿಗಳೂ ಸಿಇಟಿ ಬರೆಯಲು ಅವಕಾಶವಿದೆ’ ಎಂದರು.

‘ಸಿಇಟಿ, ನೀಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಸೇರಿ ರಾಜ್ಯದಲ್ಲಿ ನಡೆಯುವ ಎಲ್ಲ ವೃತ್ತಿಪರ ಕೋರ್ಸ್‌ಗಳಿಗೆ ಪಿಯುಸಿ ಪರೀಕ್ಷೆಯಲ್ಲಿನ ಅಂಕಗಳನ್ನು ಪರಿಗಣಿಸದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಸಲಹೆ ನೀಡಿದ್ದರು. 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಈ ಬದಲಾವಣೆ ಅನ್ವಯ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಸಿಇಟಿಯಲ್ಲಿ ಎಂಜಿನಿಯರಿಂಗ್, ಪಶುವೈದ್ಯ, ಕೃಷಿ ವಿಜ್ಞಾನ, ಆರ್ಕಿಟೆಕ್ಟ್, ಫಾರ್ಮಸಿ ಪ್ರವೇಶ ಪರೀಕ್ಷೆಗೆ ಇದ್ದ ಅರ್ಹ ಅಂಕಗಳ ಷರತ್ತು ತೆಗೆದುಹಾಕಲಾಗಿದೆ. ಸಿಇಟಿ ಅಂಕ ಆಧರಿಸಿ ರ‍್ಯಾಂಕ್‌ ನೀಡಲಾಗುವುದು. ಸಿಇಟಿ ಬರೆಯಲು ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇ 45 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಶೇ 40ರಷ್ಟು ಅಂಕ ಗಳಿಸಬೇಕೆಂಬ ಷರತ್ತು ಇತ್ತು. ಆದರೆ ಈಗ ಬದಲಿಸಿದ್ದು, ಪಿಸಿಎಂ ಹಾಗೂ ನಿಗದಿತ ಐಚ್ಛಿಕ ವಿಷಯಗಳಲ್ಲಿ ಉತ್ತೀರ್ಣರಾಗಿರುವ ಎಲ್ಲರೂ ಸಿಇಟಿ ಬರೆಯಬಹುದು. ಅಂಕಗಳ ಮಿತಿ ಸಡಿಲಿಕೆ ಮಾಡಿರುವ ಬಗ್ಗೆ ಎಲ್ಲ ಸಂಬಂಧಿತ ಪರೀಕ್ಷಾ ಮಂಡಳಿಗಳಿಗೆ ಪತ್ರ ಬರೆಯಲಾಗುವುದು’ ಎಂದರು.

ಸಿಇಟಿಗೂ ನೀಟ್‌ನಂತೆ ಅಂಕ ಮಿತಿ?

‘ನೀಟ್‌ನಲ್ಲಿ ಇಂತಿಷ್ಟು ಅಂಕ ಗಳಿಸಿದರೆ ಮಾತ್ರ ವೈದ್ಯ ಕೋರ್ಸ್‌ ಗಳಿಗೆ ಪ್ರವೇಶ ಇದೆ. ಅದೇ ಪದ್ಧತಿಯನ್ನು ಸಿಇಟಿಯಲ್ಲೂ ತರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ವಿಜ್ಞಾನ ಪದವಿ ಕೋರ್ಸು ಗಳಿಗೆ ಸಿಇಟಿ ಅಂಕ ಆಧರಿಸಿಯೇ ಪ್ರವೇಶ ನೀಡುವ ಯೋಚನೆ ಮಾಡಲಾಗುತ್ತಿದೆ. ಈ ಬಗ್ಗೆಯೂ ವಿಸ್ತೃತವಾಗಿ ಯೋಚಿಸಲಾಗುತ್ತಿದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.