ADVERTISEMENT

ಶಾಲಾ ಅವಧಿ: ಬಾಹ್ಯ ಪರೀಕ್ಷೆಗಳಿಗೆ ಶಿಕ್ಷಣ ಇಲಾಖೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 16:06 IST
Last Updated 1 ಜುಲೈ 2025, 16:06 IST
   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಯಾವುದೇ ನೇಮಕಾತಿ ಪ್ರಾಧಿಕಾರಗಳು ಶಾಲಾ ದಿನಗಳಲ್ಲಿ ಬಾಹ್ಯ ಪರೀಕ್ಷೆಗಳನ್ನು ಶಾಲಾ ಆವರಣಗಳಲ್ಲಿ ಹಮ್ಮಿಕೊಳ್ಳಬಾರದು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಆಯೋಗಳು, ಪ್ರಾಧಿಕಾರಗಳು, ಖಾಸಗಿ ಸಂಸ್ಥೆಗಳು ನಡೆಸುವ ಯಾವುದೇ ಪರೀಕ್ಷೆಗೆ ರಜಾ ದಿನಗಳಲ್ಲಿ ಮಾತ್ರ ಅವಕಾಶ ನೀಡಬೇಕು. ಶಾಲೆಗಳು ನಡೆಯುವ ಅವಧಿಯಲ್ಲಿ ಅವಕಾಶ ನೀಡಿದರೆ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್‌ ಪ್ರಾಂಶುಪಾಲರು, ಶಾಲಾ ಮುಖ್ಯಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್‌ ಹೇಳಿದ್ದಾರೆ.

ಶಿಕ್ಷಕರು, ಮುಖ್ಯಶಿಕ್ಷಕರನ್ನು ಶಾಲಾ ಅವಧಿಯ ದಿನಗಳಲ್ಲಿ ತರಬೇತಿ ಕಾರ್ಯಕ್ರಮ, ಕಾರ್ಯಾಗಾರ, ಸಭೆ–ಸಮಾರಂಭಗಳಿಗೆ ನಿಯೋಜನೆ ಮಾಡಬಾರದು. ಒಒಡಿ, ಲಿಖಿತ ಅಥವಾ ಮೌಖಿಕ ಆದೇಶಗಳ ಮೂಲಕ ಕಳುಹಿಸಬಾರದು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳೂ ಇಂತಹ ನಿರ್ದೇಶನ ನೀಡಬಾರದು ಎಂದು ಸೂಚಿಸಿದ್ದಾರೆ.

ADVERTISEMENT

ಶಾಲಾ ಅವಧಿಯಲ್ಲಿ ಸಭೆಗಳನ್ನು ಕರೆಯುವುದು, ವಿಡಿಯೊ ಕಾನ್ಫರೆನ್ಸ್‌ ನಡೆಸುವುದನ್ನು ಮಾಡಬಾರದು. ಶಾಲೆಗೆ ಭೇಟಿ ನೀಡುವ ಅಧಿಕಾರಿಗಳು ಮಕ್ಕಳ ತರಗತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳನ್ನೂ ಅನ್ಯ ಕಾರ್ಯಕ್ರಮಗಳಿಗೆ ಕಳುಹಿಸಬಾರದು. ಲಿಖಿತ ಆದೇಶವಿಲ್ಲದೆ ಸಾಫ್ಟ್‌ವೇರ್‌ಗಳಲ್ಲಿ ದತ್ತಾಂಶ ನಮೂದಿಸುವಂತೆ ಶಿಕ್ಷಕರಿಗೆ ಸೂಚಿಸಬಾರದು ಎಂದು ವಿವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.