ಬೆಂಗಳೂರು: ವರ್ಗಾವಣೆಗೊಂಡ 22 ಪ್ರೌಢಶಾಲಾ ಸಹ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಎರಡು ತಿಂಗಳಿನಿಂದ ಸ್ಥಳವನ್ನೇ ತೋರಿಸಿಲ್ಲ. ಅವರೆಲ್ಲ ಎರಡು ತಿಂಗಳಿನಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.
ಪ್ರೌಢಶಾಲೆಯ 55 ಶಿಕ್ಷಕರನ್ನು ಆ.22ರಂದು ಬೋಧಕೇತರ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಅದುವರೆಗೂ ಬೋಧಕೇತರ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು ಸ್ಥಳ ನಿಯುಕ್ತಿಗಾಗಿ ಆಯಕ್ತರು, ಹೆಚ್ಚುವರಿ ಆಯುಕ್ತರ ಕಚೇರಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಅವರಲ್ಲಿ 33 ಶಿಕ್ಷಕರಿಗೆ ಪ್ರೌಢಶಾಲೆಗಳಲ್ಲಿ ಖಾಲಿ ಇದ್ದ ಹುದ್ದೆಗಳನ್ನು ತೋರಿಸಿ, ಆದೇಶ ನೀಡಲಾಗಿತ್ತು. ಆದರೆ, ಬೆಂಗಳೂರು ವಿಭಾಗದ 14, ಬೆಳಗಾವಿ ವಿಭಾಗದ 7 ಕಲಬುರಗಿ ವಿಭಾಗದ ಒಬ್ಬರು ಶಿಕ್ಷಕರಿಗೆ ಇದುವರೆಗೂ ಸ್ಥಳ ತೋರಿಸಿಲ್ಲ.
‘ಶಿಕ್ಷಕರ ಸಾಮಾನ್ಯ ವರ್ಗಾವಣೆಯಲ್ಲಿ ಹೆಚ್ಚುವರಿ ಮತ್ತು ಮರು ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ಥಳ ನಿಯುಕ್ತಿಗೊಳಿಸುವುದಾಗಿ ಆಯುಕ್ತರು ಹೇಳಿದ್ದರು. ಸೆ.19ರಂದೇ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡರೂ ಸ್ಥಳ ನೀಡಿಲ್ಲ. ಗಣತಿ ಕಾರ್ಯಕ್ಕೂ ಬಳಸಿಕೊಂಡಿಲ್ಲ. ಸ್ಥಳ ನಿಯುಕ್ತಿಗಾಗಿ ನಿತ್ಯವೂ ಹೆಚ್ಚುವರಿ ಆಯುಕ್ತರು, ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಅಲೆಯುವಂತಾಗಿದೆ. ವೇತನವೂ ಇಲ್ಲದೆ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಹಾಗಾಗಿ, ಸ್ಥಳ ನಿಯುಕ್ತಿಗೊಳಿಸಿ, ಬೋಧನಾ ಕಾರ್ಯಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.