ADVERTISEMENT

ಪರೀಕ್ಷಾ ವೆಚ್ಚದ ಶುಲ್ಕ;ಶಿಕ್ಷಣ ಹಕ್ಕು ಕಾಯ್ದೆ ವಿರೋಧಿ ನೀತಿ: ಲೋಕೇಶ್ ತಾಳಿಕಟ್ಟೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 16:17 IST
Last Updated 4 ಫೆಬ್ರುವರಿ 2024, 16:17 IST
ಲೋಕೇಶ್ ತಾಳಿಕಟ್ಟೆ
ಲೋಕೇಶ್ ತಾಳಿಕಟ್ಟೆ   

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷಾ ವೆಚ್ಚದ ಶುಲ್ಕವಾಗಿ ಪ್ರತಿ ವಿದ್ಯಾರ್ಥಿಯಿಂದ ₹ 50 ಸಂಗ್ರಹಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಹೊರಡಿಸಿರುವ ಸುತ್ತೋಲೆಯು ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ’ಯ ವಿರೋಧಿ ನೀತಿಯಾಗುತ್ತದೆ’ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಅಭಿಪ್ರಾಯಪಟ್ಟಿದೆ.

‘ಈ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಶಿಕ್ಷಣ ಸಚಿವರಿಗೆ ತಿಳಿ ಹೇಳಬೇಕು. ಅಲ್ಲದೆ, ಈ ಕುರಿತು ಸಂಬಂಧಪಟ್ಟ ಸಂಘಸಂಸ್ಥೆಗಳ ಜೊತೆಗೆ ಸಭೆ ನಡೆಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ

‘ಪೂರ್ವಸಿದ್ಧತಾ ಪರೀಕ್ಷಾ ವೆಚ್ಚದ ಶುಲ್ಕದ ವಿಚಾರದಲ್ಲಿ ಕಳೆದ ವರ್ಷವೇ ನಮ್ಮ ಸಂಘ ವಿರೋಧ ವ್ಯಕ್ತಪಡಿಸಿದೆ. ಶುಲ್ಕ ವಿನಾಯಿತಿಗೆ ಆಗ್ರಹಿಸಿ ಕಳೆದ ನಾಲ್ಕು ವರ್ಷದಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. 9ನೇ ತರಗತಿಯಿಂದ 10ನೇ ತರಗತಿಗೆ ಸಾವಿರಾರು ವಿದ್ಯಾರ್ಥಿಗಳು ನೋಂದಣಿಯನ್ನೇ ಮಾಡಿಕೊಳ್ಳುವುದಿಲ್ಲ. ಶುಲ್ಕ ಪಾವತಿಸಲಾಗದೆ ಸಾವಿರಾರು ವಿದ್ಯಾರ್ಥಿಗಳು ಪ್ರತಿ ವರ್ಷ ಪರೀಕ್ಷೆಯಿಂದ ದೂರ ಉಳಿಯುತ್ತಿರುವ ವಿಷಯವನ್ನೂ ಬಹಿರಂಗಪಡಿಸಿದ್ದೇವೆ’ ಎಂದು ಪತ್ರದಲ್ಲಿ ತಾಳಿಕಟ್ಟೆ ತಿಳಿಸಿದ್ದಾರೆ.

ADVERTISEMENT

‘ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. ಶಿಕ್ಷಕರೂ ಇಲ್ಲ. ಈ ಪರಿಸ್ಥಿತಿ ನೋಡಿ 50 ಲಕ್ಷಕ್ಕೂ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಬಯಸಿ ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದರೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಆಗಲಿದೆ. ಎಲ್ಲ‌ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಅವರು ಒತ್ತು ನೀಡುತ್ತಾರೆ. ಎಲ್ಲ ಮಕ್ಕಳಿಗೆ ಅಕ್ಷರ ದಾಸೋಹ ಮಾಡುತ್ತಾರೆ ಎಂಬುದು ನಂಬಿಕೆಯಾಗಿತ್ತು. ಆದರೆ, ಈ ನಂಬಿಕೆಗಳು ದಿನ ಕಳೆದಂತೆ ಹುಸಿ ಆಗುತ್ತಿರುವುದು ಆತಂಕ ಹೆಚ್ಚಿಸಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.