ADVERTISEMENT

ಮನೆ ಬಳಿ ಮಕ್ಕಳಿಗೆ ಪಾಠ: ಪ್ರಜಾವಾಣಿ ವರದಿ ಓದಿ ಕೆಂಪಯ್ಯನ ದೊಡ್ಡಿಗೆ ಸಚಿವ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 9:22 IST
Last Updated 25 ಜುಲೈ 2020, 9:22 IST
   
""

ಮಂಡ್ಯ: ಮಳವಳ್ಳಿ ತಾಲ್ಲೂಕಿನ ಕೆಂಪಯ್ಯನ ದೊಡ್ಡಿ ಸರ್ಕಾರಿ ಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್‌ ಶನಿವಾರ ಭೇಟಿ ನೀಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಕೊರೊನಾ ಸೋಂಕು ಹರಡುತ್ತಿರುವ ಕಾರಣ ಶಾಲೆಗಳು ಆರಂಭವಾಗದೇ ಇರುವುದರಿಂದ ಮಳವಳ್ಳಿ ತಾಲ್ಲೂಕಿನ ಎರಡು ಶಾಲೆಯ ಶಿಕ್ಷಕರು ಮಕ್ಕಳಿಗೆ ಅವರ ಮನೆಯ ಬಳಿಯೇ ತೆರಳಿ ಪಾಠ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಬಗ್ಗೆ ‘ಪ್ರಜಾವಾಣಿ’ ಜುಲೈ 23ರಂದು ‘ಮನೆಯ ಬಳಿಯೇ ಮಕ್ಕಳಿಗೆ ಪಾಠ’ ಶೀರ್ಷಿಕೆಯೊಂದಿಗೆ ವರದಿ ಪ್ರಕಟಿಸಿತ್ತು.

ಈ ವರದಿ ಕುರಿತು ಫೇಸ್‌ಬುಕ್‌ನಲ್ಲಿ ಪ್ರಸ್ತಾಪಿಸಿರುವ ಸಚಿವರು, ‘ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ನೋಡಿ ಇಂದು ಮಳವಳ್ಳಿ ತಾಲೂಕಿನ ಕೆಂಪಯ್ಯನ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದೆ. ಅಲ್ಲಿನ ಶಿಕ್ಷಕರು ಕೊರೋನಾ ಕಾರಣದಿಂದ ಮಕ್ಕಳು ಶಿಕ್ಷಣ ಪಡೆಯುವುದರಿಂದ ವಂಚಿತರಾಗಬಾರದು ಎಂಬ ಕಾರಣದಿಂದ ದೊಡ್ಡ ಕಾರ್ಯವನ್ನು ಮಾಡುತ್ತಿದ್ದಾರೆ.

ADVERTISEMENT

ಅದೆಂದರೆ ಮಕ್ಕಳು ಇರುವ ಜಾಗಗಳಿಗೇ ಹೋಗಿ ಅಲ್ಲಿ ಯಾವುದಾದರೂ ಮನೆಯ ಪಡಸಾಲೆಯಲ್ಲಿ ಶಾರೀರಿಕ ಅಂತರವನ್ನು ಕಾಪಾಡಿಕೊಂಡು ಮಕ್ಕಳಿಗೆ ಪಾಠ ಕಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇಂದು ಶಾಲೆಗೆ ಭೇಟಿ ನೀಡಿದಾಗ ಸ್ಥಳೀಯ ಶಾಸಕ ಶ್ರೀ ಅನ್ನದಾನಿ ಸಹ ಜೊತೆ ನೀಡಿದರು‌. ಶಾಲೆಯ ಶಿಕ್ಷಕರನ್ನು, ಗ್ರಾಮಸ್ಥರನ್ನು ಮಾತನಾಡಿಸಿದೆ. ಶಿಕ್ಷಕರಿಗೆ ನನ್ನ‌ ಮೆಚ್ಚುಗೆಯ ನುಡಿಗಳನ್ನು ತಿಳಿಸಿದೆ.‌ ನಂತರ ಗ್ರಾಮದ ಮೂರು ಜಾಗಗಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ತರಗತಿಗಳಿಗೆ ಭೇಟಿ ನೀಡಿದೆ. ಮಕ್ಕಳೊಡನೆ ಬೆರೆತು ಅವರು ಕಲಿಯುತ್ತಿರುವ ಪಾಠಗಳ ಕುರಿತು ಪ್ರಶ್ನೆ ಕೇಳಿ, ಕೊರೋನಾ ಸಮಯದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ವಿವರಿಸಿದೆ.

ಈ ಎಲ್ಲಾ ಶಿಕ್ಷಕರ ಕಾರ್ಯತತ್ಪರತೆ ನನಗೆ ತುಂಬು ಸಂತಸ ನೀಡಿದೆ. ಈ ಶಿಕ್ಷಕರ ಕಾರ್ಯ ನೋಡಿದ ಕೆಲ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸಿರುವ ಉದಾಹರಣೆಯನ್ನೂ ಕೇಳಿದೆ’ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.