ಹುಬ್ಬಳ್ಳಿ/ಮಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಉತ್ತರ ಕನ್ನಡ ಜಿಲ್ಲೆ ಕುಮಟಾದ ಗಿಬ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಭೂಮಿಕಾ ಹೆಗಡೆ ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರ ಗ್ರಾಮದ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಪೃಥ್ವೀಶ ಗೋವಿಂದಪ್ಪ ಗೊಲ್ಲರಹಳ್ಳಿ 625ಕ್ಕೆ 625 ಅಂಕ ಗಳಿಸಿದ್ದಾರೆ.
ಭೂಮಿಕಾಗೆ ಈ ಮೊದಲು ಪ್ರಥಮ ಭಾಷೆ ಇಂಗ್ಲಿಷ್‌ಗೆ 125ಕ್ಕೆ 124 ಅಂಕಗಳು ಹೊರತುಪಡಿಸಿ ಉಳಿದ ವಿಷಯಗಳಿಗೆ ಪೂರ್ಣಾಂಕ ಬಂದಿತ್ತು. ಪೃಥ್ವೀಶಗೆ ವಿಜ್ಞಾನದಲ್ಲಿ 97 ಅಂಕಗಳು ಬಂದಿದ್ದು ಮರು ಮೌಲ್ಯಮಾಪನದಲ್ಲಿ 100 ಅಂಕಗಳು ಬಂದಿವೆ.
ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾನಿಧ್ಯ ರಾವ್ ಹಾಗೂ ಉಡುಪಿ ಜಿಲ್ಲೆಯ ಕೋಟ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಿ ಪೈ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾನಿಧ್ಯ ರಾವ್ ಈ ಮೊದಲು 625ರಲ್ಲಿ 624 ಅಂಕ ಪಡೆದಿದ್ದರು.
ಮೈಸೂರು/ಮಂಡ್ಯ ವರದಿ: ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿ ಎಂ.ಎನ್.ತನ್ಮಯ್ ಹಾಗೂ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಪೂರ್ಣ ಪ್ರಜ್ಞಾ ಶಾಲೆಯ ಪುನೀತಾ ಮರು ಮೌಲ್ಯಮಾಪನದಲ್ಲಿ 625 ಅಂಕ ಗಳಿಸಿದ್ದಾರೆ. ಮೊದಲಿಗೆ ಪ್ರಕಟವಾಗಿದ್ದ ಫಲಿತಾಂಶದಲ್ಲಿ ಪುನೀತಾಗೆ 624 ಹಾಗೂ ತನ್ಮಯ್‌ಗೆ 622 ಅಂಕಗಳಷ್ಟೇ ದೊರಕಿದ್ದವು.
ಸೊರಬ (ಶಿವಮೊಗ್ಗ ಜಿಲ್ಲೆ) ವರದಿ: ಪಟ್ಟಣದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಡಿ. ಸಿರಿಗೌರಿ ಎಸ್ಎಸ್ಎಲ್‌ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಮೊದಲು ಪ್ರಕಟವಾಗಿದ್ದ ಫಲಿತಾಂಶದಲ್ಲಿ 622 ಅಂಕ ಗಳಿಸಿದ್ದ ಈ ವಿದ್ಯಾರ್ಥಿನಿಗೆ ಮತ್ತೆ 3 ಅಂಕಗಳು ಲಭಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.