ADVERTISEMENT

ಕಲಿಕೆಗೆ ‘ವಿದ್ಯಾಗಮ’ ಜಾರಿ

ಮಕ್ಕಳ ನಿರಂತರ ಕಲಿಕೆಗೆ ವೈಜ್ಞಾನಿಕ ಸ್ವರೂಪದ ಯೋಜನೆ– ಸಚಿವ ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 0:11 IST
Last Updated 5 ಆಗಸ್ಟ್ 2020, 0:11 IST
ಸಚಿವ ಎಸ್.ಸುರೇಶ್‌ಕುಮಾರ್
ಸಚಿವ ಎಸ್.ಸುರೇಶ್‌ಕುಮಾರ್   

ಬೆಂಗಳೂರು: ‘ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪಾಠದ ಕಡೆಗೆ ಸೆಳೆಯಲು ‘ವಿದ್ಯಾಗಮ’ ನಿರಂತರ ಕಲಿಕಾ ಯೋಜನೆ ಜಾರಿಗೆ ತರಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

‘ಎಲ್ಲ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವುದು ಈ ಯೋಜನೆಯ ಉದ್ದೇಶ’ ಎಂದು ಅವರು ತಿಳಿಸಿದ್ದಾರೆ.

‘ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಅರಣ್ಯದಂಚಿನ ಗ್ರಾಮಗಳಲ್ಲಿರುವ, ಟಿ.ವಿ. ಮೊಬೈಲ್‌, ವಿದ್ಯುತ್‌ ಸೌಲಭ್ಯ ಇಲ್ಲದ.. ಹೀಗೆ ಎಲ್ಲ ಸ್ತರಗಳಲ್ಲಿರುವ ಮಕ್ಕಳ ಕಲಿಕೆ ನಿರಂತರವಾಗಿರುವಂತೆ ವೈಜ್ಞಾನಿಕವಾಗಿ ಈ ಯೋಜನೆಯನ್ನು ರೂಪುಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದೂ ಅವರು ವಿವರಿಸಿದ್ದಾರೆ.

ADVERTISEMENT

‘ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ನಿರಂತರ ಕಲಿಕೆ, ಪ್ರತಿ ಮಗು ಕಲಿಕಾ ವ್ಯಾಪ್ತಿಗೆ ಬರುವಂತೆ ಯೋಜನೆ, ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮನೆಗಳಿಗೆ ಮಧ್ಯಾಹ್ನದ ಉಪಹಾರ ಸಾಮಗ್ರಿ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಖಾತ್ರಿ, ವಲಸೆ ಮಕ್ಕಳ ಅವಶ್ಯಕತೆಗೆ ಆದ್ಯತೆ ಈ ಯೋಜನೆಯ ವಿಶೇಷತೆಗಳು’ ಎಂದೂ ಅವರು ವಿವರಿಸಿದ್ದಾರೆ.

ಮುಖ್ಯಾಂಶಗಳು

*20– 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕ

*ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದವರಿಗೆ (ಮೊಬೈಲ್‌ರಹಿತ), ಇಂಟರ್ನೆಟ್ ರಹಿತ ಮೊಬೈಲ್ ಫೋನ್ ಹೊಂದಿರುವವರಿಗೆ, ಇಂಟರ್ನೆಟ್ ಸಹಿತ ಕಂಪ್ಯೂಟರ್, ಟ್ಯಾಬ್, ಸ್ಮಾರ್ಟ್ ಫೋನ್ ಇರುವವರಿಗೆ ಹೀಗೆ ಈ ಮೂರು ವರ್ಗದ ಮಕ್ಕಳಿಗೆ ತರಗತಿ

*1–5, 6–8, 8– 10ನೇ ತರಗತಿ ಮಕ್ಕಳನ್ನು ವಾಸ ಸ್ಥಳ ಆಧರಿಸಿ ಹಂಚಿಕೆ. ವಾರಕ್ಕೆ ಕನಿಷ್ಠ ಒಮ್ಮೆ ಶಿಕ್ಷಕರು ಭೇಟಿ ಮಾಡಿ ಚರ್ಚೆ.‌

*ಸ್ವಯಂ ಸೇವಕರು, ಸರ್ಕಾರೇತರ ಸಂಸ್ಥೆಗಳಿಂದ ಪಾಠ

*ವಿಶೇಷ ಅಗತ್ಯದ ಮಕ್ಕಳ ಕಡೆಗೆ ಗಮನ

*‘ಸಂವೇದ’ ಟಿ.ವಿ ಆಧಾರಿತ ಕಲಿಕೆ

*ಶಿಕ್ಷಕರ ಬೋಧನೆಯ ವಿಡಿಯೊ ಯೂಟ್ಯೂಬ್ ಚಾನಲ್ ‘ಮಕ್ಕಳ ವಾಣಿ’ಯಲ್ಲೂ ಅಪ್ಲೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.