ADVERTISEMENT

‘ನಮ್ಮ ಜಮೀನು ಎಲ್ಲಿದೆ?’- ರೈತರ ಹುಡುಕಾಟ!

ಕೆ.ಜೆ.ಮರಿಯಪ್ಪ
Published 17 ಆಗಸ್ಟ್ 2019, 1:31 IST
Last Updated 17 ಆಗಸ್ಟ್ 2019, 1:31 IST
ಪ್ರವಾಹ – ಸಾಂದರ್ಭಿಕ ಚಿತ್ರ
ಪ್ರವಾಹ – ಸಾಂದರ್ಭಿಕ ಚಿತ್ರ   

ಬೆಂಗಳೂರು: ಇನ್ನೂ ಕೆಲ ದಿನಗಳು ಕಳೆದಿದ್ದರೆ ಭತ್ತದ ಮೂಟೆಗಳು ಮನೆ ಸೇರುತ್ತಿದ್ದವು; ಆಳುದ್ದ ಬೆಳೆದು ನಿಂತಿದ್ದ ಕಬ್ಬು ಹಾಗೂ ಮುಸುಕಿನ ಜೋಳದಿಂದ ನಾಲ್ಕು ಕಾಸು ಸಿಗುತ್ತಿತ್ತು. ಬೆಳೆ ಹಾಳಾಗಿರುವುದು ಹೋಗಲಿ, ತಮ್ಮ ಜಮೀನು ಎಲ್ಲಿದೆ ಎಂದು ರೈತರು ಹುಡುತ್ತಿದ್ದಾರೆ.

ಪ್ರವಾಹಕ್ಕೆ ಬೆಳೆಯಷ್ಟೇ ಹಾಳಾಗಿಲ್ಲ. ಕೃಷಿ ಭೂಮಿಯೂ ಕೊಚ್ಚಿಕೊಂಡು ಹೋಗಿದೆ. ಫಲವತ್ತಾದ ಮಣ್ಣು ಪ್ರವಾಹದಲ್ಲಿ ಕರಗಿ ಹೋಗಿದ್ದು, ಜಮೀನಿನಲ್ಲಿ ಬೃಹತ್ ಪ್ರಮಾಣದ ಕೊರಕಲುಗಳು ನಿರ್ಮಾಣವಾಗಿವೆ. ಬೆಳೆ ಹೋದರೆ ಮತ್ತೊಮ್ಮೆ ಬೆಳೆಯಬಹುದು. ಕೃಷಿ ಮಾಡುವ ಜಮೀನು ಮಾಯವಾದರೆ ಏನು ಮಾಡುವುದು ಎಂದು ರೈತರು ಚಿಂತಿತರಾಗಿದ್ದಾರೆ.

ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಕೊರಕಲು ಇದ್ದರೆ, ಹಲವೆಡೆ ಜಮೀನಿನ ಮೇಲೆ ಹೊಸದಾಗಿ ಮಣ್ಣು ಬಂದು ತುಂಬಿಕೊಂಡಿದೆ.ರಾಶಿಗಟ್ಟಲೆ, ಏರಿಯಂತೆ ಬಂದು ಬಿದ್ದಿರುವ ಮಣ್ಣು ತೆರವು ಮಾಡಲು ಏನು ಮಾಡಬೇಕು, ಅದನ್ನು ಎಲ್ಲಿಗೆ ಸಾಗಿಸಬೇಕು, ನಮ್ಮ ಭೂಮಿಯನ್ನು ಗುರುತಿಸುವುದಾದರೂ ಹೇಗೆ ಎಂದು ಅಸಹಾಯಕರಾಗಿ ನೋಡುತ್ತಿದ್ದಾರೆ.

ADVERTISEMENT

ಬೆಳಗಾವಿ ಜಿಲ್ಲೆಯಿಂದ ಆರಂಭವಾಗಿ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಹಾವೇರಿ ಸೇರಿದಂತೆ ನೆರೆಗೆ ಸಿಲುಕಿರುವ ಜಿಲ್ಲೆಗಳಲ್ಲಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.ರೈತರ ಬದುಕೂ ಈ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

* ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಪರಿಹಾರ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ನಷ್ಟದ ಪೂರ್ಣ ವಿವರ ಸಿಕ್ಕ ನಂತರ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳುತ್ತದೆ.

-ಜಿ.ವೈ.ಶ್ರೀನಿವಾಸ, ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.