ADVERTISEMENT

ಮೊಟ್ಟೆ ವಿತರಣೆಗೆ ವಿರೋಧ ಸರಿಯಲ್ಲ: ಡಾ.ವಿ.ಪಿ.ನಿರಂಜನಾರಾಧ್ಯ

ಡಾ. ವಿ.ಪಿ. ನಿರಂಜನಾರಾಧ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 21:01 IST
Last Updated 2 ಡಿಸೆಂಬರ್ 2021, 21:01 IST
ವಿ.ಪಿ. ನಿರಂಜನಾರಾಧ್ಯ
ವಿ.ಪಿ. ನಿರಂಜನಾರಾಧ್ಯ   

ಬೆಂಗಳೂರು: ಅಪೌಷ್ಟಿಕತೆ ನಿವಾರಿಸಲು ಕಲ್ಯಾಣ ಕರ್ನಾಟಕದ ಭಾಗದ 7 ಜಿಲ್ಲೆಗಳ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಹಣ್ಣು ಕೊಡುವ ಸರ್ಕಾರದ ನಿರ್ಧಾರವನ್ನು ಕೆಲ ಮೂಲಭೂತವಾದಿ ಧಾರ್ಮಿಕ ಸಂಘಟನೆಗಳು ವಿರೋಧಿಸುತ್ತಿರುವುದು ವಿಷಾದನೀಯ ಎಂದು ಶಾಲಾಭಿವೃದ್ಧಿ ಸಮಿತಿಗಳ ಸಮನ್ವಯ ವೇದಿಕೆ ಪ್ರತಿಪಾದಿಸಿದೆ.

ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ ವೇದಿಕೆಯ ಡಾ. ವಿ.ಪಿ. ನಿರಂಜನಾರಾಧ್ಯ ಅವರು, ನಮ್ಮ ಮಕ್ಕಳಿಗೆ ಪ್ರೋಟಿನ್ ಯುಕ್ತ ಆಹಾರ ನಿರಂತರವಾಗಿ ದೊರೆಯುತ್ತಿಲ್ಲ. ಇದರಿಂದಾಗಿ ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದೂ ವರದಿಗಳೂ ಹೇಳಿವೆ. ಪರಿಸ್ಥಿತಿ ಹೀಗಿರುವಾಗ, ಸದುದ್ದೇಶದಿಂದ ಆರಂಭಿಸಿರುವ ಮೊಟ್ಟೆ ವಿತರಣೆ ಯೋಜನೆಯನ್ನು ವಿರೋಧದ ಕಾರಣಕ್ಕೆ ಸರ್ಕಾರ ಕೈಬಿಡಬಾರದು. ಈ ವಿಷಯದಲ್ಲಿ ಜಾತಿ, ಧರ್ಮ ಹಾಗೂ ರಾಜಕೀಯ ಬೆರೆಸದೆ ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಜಾರಿಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಶೇ 32 ರಷ್ಟು ಮಕ್ಕಳು ಕಡಿಮೆ ತೂಕ , ಶೇ 32.5 ಮಕ್ಕಳು ಕುಂಠಿತ ಬೆಳವಣಿಗೆ , ಶೇ 45.2 ಮಕ್ಕಳು, ಮಹಿಳೆಯರು ರಕ್ತ ಹೀನತೆ ಹಾಗೂ10 ರಿಂದ 19 ವರ್ಷ ವಯಸ್ಸಿನ ಶೇ17.2 ರಷ್ಟು ಮಕ್ಕಳು ತೀವ್ರ ರಕ್ತ ಹೀನತೆ ಹೊಂದಿದ್ದಾರೆ ಎಂದು 2020-21 ರ ನೀತಿ ಆಯೋಗದ ವರದಿಯುವರದಿ ಹೇಳಿದೆ. ಇಂತಹ ಸಂದರ್ಭದಲ್ಲಿಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ, ಮೊಟ್ಟೆ ಮತ್ತು ಹಣ್ಣು ವಿತರಿಸುವ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯ ಹಣ್ಣು ಮತ್ತು ಕಾಳುಗಳನ್ನು ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಮೊಟ್ಟೆಗೆ ಅಪಸ್ವರ: ಮೂರ್ಖತನ’

‘ಮೊಟ್ಟೆ ಎಂಬುದು ಸಸ್ಯಹಾರವೋ ಇಲ್ಲ ಮಾಂಸಹಾರವೋ ಎಂಬ ಚರ್ಚೆ ಜೀವಂತವಾಗಿರುವಾಗಲೇ ಮೊಟ್ಟೆ ವಿತರಣೆ ಬಗ್ಗೆ ಅಪಸ್ವರ ಎತ್ತುವುದು ಮೂರ್ಖತನದ ಪರಮಾವಧಿ’ ಎಂದು ಕಾಂಗ್ರೆಸ್ ಮುಖಂಡ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

‘ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ನೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ವಿಷಮ ಸಂದರ್ಭದಲ್ಲಿ ನಮ್ಮ ಹೋರಾಟ ಇರಬೇಕಾದ್ದು ಹಸಿವಿನ ವಿರುದ್ಧವೇ ವಿನಃ ಆಹಾರದ ವಿರುದ್ಧ ಅಲ್ಲ. ಸಾಧ್ಯವಾದರೆ ಮಕ್ಕಳಿಗೆ ಉತ್ತಮ ಆಹಾರ ನೀಡಲು ಪ್ರಯತ್ನಿಸಿ, ಇಲ್ಲವೇ ಸುಮ್ಮನಿರಿ’ ಎಂದು ಅವರು ಸಲಹೆ ನೀಡಿದ್ದಾರೆ.

‘ಬಡತನ, ಹಸಿವು ಮತ್ತು ದಾಸೋಹದ ಕಲ್ಪನೆ ಅರಿಯದ ಮತ್ತು ವೈಜ್ಞಾನಿಕತೆಯನ್ನು ಸದಾ ಕೊಲೆ ಮಾಡುವಂತೆ ವರ್ತಿಸುವ ಪಟ್ಟಭದ್ರ ಹಿತಾಸಕ್ತಿಗಳು ಬಡವರ ಆಹಾರದ ಮೇಲೆ ದಾಳಿ ನಡೆಸುತ್ತಿರುವುದು ಅಮಾನವೀಯ ಸಂಗತಿ’ ಎಂದವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.