ADVERTISEMENT

ಗ್ರಾಮೀಣ ಮತದಾರರಿಂದ ಬಹಿಷ್ಕಾರದ ಕೂಗು

ಕೊಡಗು ಜಿಲ್ಲೆಯ ಗ್ರಾಮೀಣ ಮತದಾರರ ಸಿಟ್ಟು, ಚುನಾವಣೆ ಸಮಯದಲ್ಲಿ ಆಕ್ರೋಶ

ಅದಿತ್ಯ ಕೆ.ಎ.
Published 14 ಡಿಸೆಂಬರ್ 2020, 14:52 IST
Last Updated 14 ಡಿಸೆಂಬರ್ 2020, 14:52 IST
ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಪದಕೊಲ್ಲಿ ಪೈಸಾರಿ ನಿವಾಸಿಗಳ ಆಕ್ರೋಶ
ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಪದಕೊಲ್ಲಿ ಪೈಸಾರಿ ನಿವಾಸಿಗಳ ಆಕ್ರೋಶ   

ಮಡಿಕೇರಿ: ಗ್ರಾಮ ಪಂಚಾಯಿತಿ ಚುನಾವಣೆಗೆ ಅಖಾಡ ಸಜ್ಜಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಹಳ್ಳಿ ರಾಜಕೀಯ ರಂಗು ಪಡೆದುಕೊಂಡಿದೆ. ಅಭ್ಯರ್ಥಿಗಳ ಸುತ್ತಾಟವೂ ಜೋರಾಗಿದೆ. ಇದೇ ಹೊತ್ತಿನಲ್ಲಿ ಜಿಲ್ಲೆಯ ಅಲ್ಲಲ್ಲಿ ಮತದಾನ ಬಹಿಷ್ಕಾರದ ಕೂಗು ಎದ್ದಿದೆ!

ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮೀಣ ಮತದಾರರು ಸಿಟ್ಟು ತೀರಿಸಿಕೊಳ್ಳುತ್ತಿದ್ದಾರೆ. ಹಿಂದೆ ಗೆದ್ದವರು ನೀಡಿದ್ದ ಭರವಸೆಗಳು ಈಡೇರದಿರುವ ಕುರಿತೂ ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರ ಮನವೊಲಿಕೆಯೇ ಈಗ ಯುವ ಅಭ್ಯರ್ಥಿಗಳಿಗೆ ಹಾಗೂ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ತಲೆನೋವಾಗಿದೆ.

ಇನ್ನೂ ತಪ್ಪದ ಸಂಕಷ್ಟ: ಕೊಡಗು ಗುಡ್ಡಗಾಡು ಪ್ರದೇಶ. ಇಲ್ಲಿ ಮೂಲ ಸೌಲಭ್ಯ ಕಲ್ಪಿಸುವುದೂ ಸವಾಲೇ ಸರಿ. ಎಷ್ಟೋ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ, ರಸ್ತೆ ಸಂಪರ್ಕ, ಕುಡಿಯುವ ನೀರಿನ ಸಮಸ್ಯೆ, ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ. ಈ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡಿರುವ ಗ್ರಾಮೀಣ ಮತದಾರರು ಪ್ರತಿಭಟನೆಯ ಬಿಸಿ ಮುಟ್ಟಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ADVERTISEMENT

ಎಲ್ಲೆಲ್ಲಿ ಬಹಿಷ್ಕಾರ?: ಸೋಮವಾರಪೇಟೆ ತಾಲ್ಲೂಕಿನ ತೋಳೂರುಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದು, ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. ಹಲವು ವರ್ಷಗಳಿಂದ ರಸ್ತೆ, ವಿದ್ಯುತ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವಿಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮವಾಗಿಲ್ಲ ಎಂದು ಗ್ರಾಮಾಭಿವೃದ್ಧಿ ಸಮಿತಿ ಸದಸ್ಯರು ದೂರಿದ್ದಾರೆ.

ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಾರ್ಡಿನ ಶಕ್ತಿ ಬಡಾವಣೆ ನಿವಾಸಿಗಳೂ ಮೂಲಸೌಕರ್ಯ ಕೊರತೆ ಹಿನ್ನೆಲೆ, ಪಂಚಾಯತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಶಕ್ತಿ ಬಡಾವಣೆ ಮುಖಂಡ ಪಳನಿಸ್ವಾನಿ ನೇತೃತ್ವದಲ್ಲಿ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ನಾಪೋಕ್ಲು ವ್ಯಾಪ್ತಿಯಲ್ಲೂ ಮತದಾನ ಬಹಿಷ್ಕಾರದ ಕೂಗು ಜೋರಾಗಿದೆ. ಆದರೆ, ಆ ಗ್ರಾಮಕ್ಕೆ ಯಾರೊಬ್ಬರೂ ಅಧಿಕಾರಿಗಳು ತೆರಳಿ ಮನವಿ ಸ್ವೀಕರಿಸಿಲ್ಲ. ಇದು ಗ್ರಾಮಸ್ಥರ ಸಿಟ್ಟು ಮತ್ತಷ್ಟು ಹೆಚ್ಚಿಸಿದೆ.

ಮೂರ್ನಾಡು-ನಾಪೋಕ್ಲು ಸಂಪರ್ಕ ಕಲ್ಪಿಸುವ ಕುಂಬಳದಾಳು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕುಂಬಳದಾಳು, ಅಯ್ಯಂಗೇರಿ, ಹೊದವಾಡ, ಕೊಟ್ಟಮುಡಿ, ಹೊದ್ದೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯ ಕೂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಗ್ರಾಮಗಳ ಮತದಾರರು ಮತದಾನವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಆಕ್ರೋಶದ ಧ್ವನಿ: ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ ಪಂಚಾಯಿತಿ ವ್ಯಾಪ್ತಿಯ ದೂಪದಕೊಲ್ಲಿ ಪೈಸಾರಿ ನಿವಾಸಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಈ ಪೈಸಾರಿಯಲ್ಲಿ ಮತ ಬಹಿಷ್ಕಾರದ ‘ಬ್ಯಾನರ್‌’ ಅಳವಡಿಸಲಾಗಿದೆ. ಸೂಕ್ತ ರಸ್ತೆಯೇ ಇಲ್ಲದಿರುವ ಕಾರಣಕ್ಕೆ, ಮಳೆಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾದವರ ಆಸ್ಪತ್ರೆಗೆ ಕರೆದೊಯ್ಯುವುದಕ್ಕೂ ಕುಟುಂಬಸ್ಥರು ಸಾಹಸವನ್ನೇ ಪಡುತ್ತಿದ್ದಾರೆ. ರಸ್ತೆಯಿಲ್ಲದಿರುವ ಕಾರಣಕ್ಕೆ ಶಾಲೆ – ಕಾಲೇಜು ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದ್ದರೂ ರಸ್ತೆ ದುರಸ್ತಿ ಆಗಿಲ್ಲ. ಅಂತಿಮವಾಗಿ ಚುನಾವಣೆಯನ್ನೇ ಬಹಿಷ್ಕರಿಸುವ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ಗ್ರಾಮಸ್ಥರಾದ ಎಚ್.ಎಂ.ರಾಜಣ್ಣ, ಪಿ.ಎ.ಸುನೀಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.