ನವದೆಹಲಿ: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6,108 ಮತಗಳನ್ನು ಅಳಿಸಲು ಯತ್ನಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿಗೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಇನ್ನಷ್ಟು ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಲಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಆದರೆ, ಲಭ್ಯವಿರುವ ಮಾಹಿತಿಯನ್ನು ತನಿಖಾಧಿಕಾರಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ ಎಂದು ಆಯೋಗ ಒತ್ತಿ ಹೇಳಿದೆ.
ಆಳಂದ ಮತ ಅಕ್ರಮ ಯತ್ನದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಒಂದು ವಾರದೊಳಗೆ ಎಲ್ಲ ಸಾಕ್ಷ್ಯಗಳನ್ನು ಒದಗಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಗಡುವು ವಿಧಿಸಿದ್ದರು. ಮತಕಳವು ಮಾಡುವವರನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ ಎಂದೂ ಆಪಾದಿಸಿದ್ದರು.
ಆಳಂದದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು 6,018 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ನಡೆಸಿದ ಸಮಯದಲ್ಲಿ 24 ಮಾತ್ರ ನಿಜವಾದವು ಎಂದು ಕಂಡುಬಂದಿದ್ದು, 5,994 ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ. ‘ತಿರಸ್ಕರಿಸಿದ ಅರ್ಜಿಗಳ ನೈಜತೆ ಅನುಮಾನಿಸಿ ಆಳಂದದ ಚುನಾವಣಾ ಅಧಿಕಾರಿ ಎಫ್‌ಐಆರ್ ದಾಖಲಿಸಿದ್ದರು. ಚುನಾವಣಾ ಆಯೋಗದ ಸೂಚನೆಗಳ ಮೇರೆಗೆ ಸಿಇಒ ಅವರು ಕಲಬುರ್ಗಿ ಎಸ್‌ಪಿ ಅವರಿಗೆ 2023ರ ಸೆಪ್ಟೆಂಬರ್ 6ರಂದು ಲಭ್ಯವಿರುವ ಎಲ್ಲ ಮಾಹಿತಿಗಳನ್ನು ಹಸ್ತಾಂತರಿಸಿದ್ದರು‘ ಎಂದು ಆಯೋಗ ಸ್ಪಷ್ಟಪಡಿಸಿದೆ.
‘ಫಾರ್ಮ್ ಉಲ್ಲೇಖ ಸಂಖ್ಯೆ, ಆಕ್ಷೇಪಣೆ ಸಲ್ಲಿಸಿದವರ ಹೆಸರು, ಎಪಿಕ್ ಸಂಖ್ಯೆ, ಲಾಗಿನ್‌ಗೆ ಬಳಸಿದ ಮೊಬೈಲ್ ಸಂಖ್ಯೆ, ಪ್ರಕ್ರಿಯೆಗೆ ಒದಗಿಸಲಾದ ಮೊಬೈಲ್ ಸಂಖ್ಯೆ, ಐಪಿ ವಿಳಾಸ, ಅರ್ಜಿದಾರರ ಸ್ಥಳ, ಫಾರ್ಮ್ ಸಲ್ಲಿಕೆ ದಿನಾಂಕ ಮತ್ತು ಸಮಯ ಮತ್ತಿತರ ಮಾಹಿತಿಗಳನ್ನು ಒದಗಿಸಲಾಗಿತ್ತು ಎಂದೂ ಆಯೋಗ ತಿಳಿಸಿದೆ.
‘ಮುಂದಿನ ದಿನಗಳಲ್ಲೂ ತನಿಖಾ ಸಂಸ್ಥೆಗೆ ಕರ್ನಾಟಕದ ಸಿಇಒ ಅವರು ಯಾವುದೇ ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲಿದ್ದಾರೆ. ಅವರು ನಿರಂತರ ಸಹಾಯ ನೀಡುತ್ತಿದ್ದಾರೆ‘ ಎಂದು ಆಯೋಗ ಹೇಳಿದೆ. ಯಾವುದೇ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.