ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಬಾರದು ಎಂಬ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕೋರಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರನ್ನು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಹಿಂಪಡೆಯಬೇಕು ಎಂಬ ಕೋರಿಕೆ ಪರಿಗಣಿಸಲು ಸಾಧ್ಯವಿಲ್ಲ. ರಜಾ ದಿನಗಳು ಹಾಗೂ ಬೋಧಕೇತರ ಸಮಯದಲ್ಲಿ ಬೋಧಕ ಸಿಬ್ಬಂದಿಯನ್ನು ಚುನಾವಣಾ ಕಾರ್ಯ, ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯಕ್ಕೆ ನಿಯೋಜನೆ ಮಾಡಲು ಸುಪ್ರೀಂ ಕೋರ್ಟ್ ಸಹ ಸಮ್ಮತಿಸಿದೆ. ಭಾರತ ಚುನಾವಣಾ ಅಯೋಗವೂ ಈ ಕುರಿತು ಸುತ್ತೋಲೆ ಹೊರಡಿಸಿದೆ ಎಂದು ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ ಹೇಳಿದ್ದಾರೆ.
ಚುನಾವಣಾ ಕಾರ್ಯಗಳಿಗಾಗಿ ಬೂತ್‌ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ನೇಮಕ ಮಾಡುವಾಗ ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಕಾಯಂ ನೌಕರರಿಗೆ ಆದ್ಯತೆ ನೀಡಬೇಕು. ಒಂದು ವೇಳೆ ಅಂತಹ ನೌಕರರು ಲಭ್ಯವಿಲ್ಲದಿದ್ದರೆ ಅಂಗನವಾಡಿ, ಗುತ್ತಿಗೆ ಶಿಕ್ಷಕರು ಅಥವಾ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದು ಎಂದು ಮಾರ್ಗಸೂಚಿ ಇದೆ ಎಂದಿದ್ದಾರೆ.
ಪ್ರಸ್ತುತ ರಾಷ್ಟ್ರಮಟ್ಟದಲ್ಲಿ, ವಿಧಾನಸಭಾ ಕ್ಷೇತ್ರಗಳ ಹಂತದಲ್ಲಿ ಬೂತ್‌ಮಟ್ಟದ ಅಧಿಕಾರಿಗಳಾಗಿ ನೇಮಕಗೊಂಡವರಿಗೆ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಶಿಕ್ಷಕರೂ ಒಳಗೊಂಡಂತೆ ಎಲ್ಲ ನೌಕರರರೂ ಕಡ್ಡಾಯವಾಗಿ ಹಾಜರಾಗಲು ಜಿಲ್ಲಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.