ADVERTISEMENT

ಚುನಾವಣಾ ತಕರಾರು: ಶಾಸಕ ರಾಮಮೂರ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:41 IST
Last Updated 28 ಜನವರಿ 2026, 15:41 IST
ಸಿ.ಕೆ. ರಾಮಮೂರ್ತಿ
ಸಿ.ಕೆ. ರಾಮಮೂರ್ತಿ   

ನವದೆಹಲಿ: ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ. 

‍ಪ್ರಕರಣದ ವಿಸ್ತೃತ ವಿಚಾರಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌, ಸಂದೀಪ್‌ ಮೆಹ್ತಾ ಹಾಗೂ ಎನ್‌.ವಿ.ಅಂಜಾರಿಯಾ ಪೀಠವು ವಜಾಗೊಳಿಸಿದೆ. 

ಜಯನಗರ ವಿಧಾನಸಭೆ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ 827 ಅಂಚೆ ಮತಗಳನ್ನು (ಪೋಸ್ಟಲ್ ಬ್ಯಾಲೆಟ್) ಮರು ಎಣಿಕೆ ಮಾಡುವಂತೆ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. 

ADVERTISEMENT

‘ಜಯನಗರ ವಿಧಾನಸಭಾ ಕ್ಷೇತ್ರಕ್ಕೆ 2023ರ ಮೇ 10ಕ್ಕೆ ಚುನಾವಣೆ ಮತ್ತು ಮೇ 13ರಂದು ಮತ ಎಣಿಕೆ ನಡೆದಿತ್ತು. ಈ ಕ್ಷೇತ್ರದಲ್ಲಿ ಒಟ್ಟು 827 ಅಂಚೆ ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 198 ಮತಗಳನ್ನು ತಿರಸ್ಕೃತಗೊಳಿಸಿ 629 ಮತಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಅವುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 164 ಮತ್ತು ಬಿಜೆಪಿಗೆ ಅಭ್ಯರ್ಥಿಗೆ 415 ಮತಗಳು ಬಂದಿದ್ದವು. ಮತ ಎಣಿಕೆಯ ಕೊನೆಯ 16ನೇ ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿ 57,297 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ 57,591 ಮತಗಳನ್ನು ಪಡೆದಿದ್ದರು‘ ಎಂದು ಸೌಮ್ಯಾ ರೆಡ್ಡಿ ಅರ್ಜಿಯಲ್ಲಿ ತಿಳಿಸಿದ್ದರು. 

‘ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 294 ಮತಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಚುನಾವಣಾ ವೀಕ್ಷಕರು ತಿರಸ್ಕೃತ ಅಂಚೆ ಮತಗಳ ಮರು ಪರಿಶೀಲನೆಗೆ ಸೂಚಿಸಿದ್ದರು. ಅದರಂತೆ ಹಲವು ಸುತ್ತುಗಳಲ್ಲಿ ತಿರಸ್ಕೃತ ಅಂಚೆ ಮತಗಳ ಮರುಪರಿಶೀಲನೆ ನಡೆದಿತ್ತು. ಇದರಿಂದಾಗಿ ಫಲಿತಾಂಶದಲ್ಲಿ ಏರಿಳಿತ ಉಂಟಾಯಿತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿಯನ್ನು ಚುನಾಯಿತ ಎಂದು ಘೋಷಿಸಲಾಯಿತು‘ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.