ದಾಖಲೆ ಪ್ರದರ್ಶಿಸಿದ ಅರವಿಂದ ಲಿಂಬಾವಳಿ
ಬೆಂಗಳೂರು: ‘ರಾಹುಲ್‌ಗಾಂಧಿಯವರ ‘ಮತ ಕಳ್ಳತನ’ದ ತರ್ಕವನ್ನು ಅನ್ವಯಿಸುವುದೇ ಆದರೆ ವರುಣ, ಸಂಡೂರು, ಮಸ್ಕಿ, ಮಾನ್ವಿ, ಬಿಟಿಎಂ ಲೇಔಟ್, ಶಿವಾಜಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲೂ ‘ಮತ ಕಳ್ಳತನ’ ಆಗಿದೆ’ ಎಂದು ಹೇಳಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಅದಕ್ಕೆ ಪೂರಕ ದಾಖಲೆಗಳನ್ನೂ ಪ್ರದರ್ಶಿಸಿದರು.
‘ಆದರೆ, ನಾನು ರಾಹುಲ್‌ಗಾಂಧಿಯಂತೆ ಬಾಲಿಶವಾಗಿ ‘ಮತ ಕಳ್ಳತನ’ ಎಂದು ಆರೋಪ ಮಾಡುವುದಿಲ್ಲ. ವಾಸ್ತವ ಚಿತ್ರಣವನ್ನು ಮುಂದಿಡುತ್ತಿದ್ದೇನೆ. ನೀವೇ ಮತದಾರರ ಪಟ್ಟಿಯನ್ನು ಪರಿಶೀಲಿಸಿ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲೂ ವಿಳಾಸವಿಲ್ಲದ ಮತದಾರರ ಸಂಖ್ಯೆ ಬಹಳಷ್ಟಿವೆ. ಇಲ್ಲಿ ಪಾರ್ಟ್ ನಂಬರ್ 8ರಲ್ಲಿ ಮತದಾರರ ಮನೆ ವಿಳಾಸ 000 ಎಂದು ಇದೆ. ಇಂತಹ ಮತದಾರರ ಪಟ್ಟಿಯ ಹಲವು ಪುಟಗಳು ನನ್ನಲ್ಲಿ ಇವೆ. ಹಾಗಿದ್ದರೆ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೂ ನಕಲಿ ಮತಗಳಿವೆಯೇ? ಇಂತಹ ಲೋಪಗಳನ್ನು ಹುಡುಕಲು ರಾಹುಲ್ ಗಾಂಧಿಯ ರೀತಿ ಆರು ತಿಂಗಳು ಬೇಕಿಲ್ಲ. ಕೇವಲ 24 ಗಂಟೆಯಲ್ಲಿ ಸಿದ್ಧಪಡಿಸಿದ್ದೇನೆ’ ಎಂದರು.
‘ಸಂಡೂರಿನಲ್ಲೂ ಇದೇ ರೀತಿ ಆಗಿದೆ. ಪಾರ್ಟ್ ಸಂಖ್ಯೆ 6 ರಲ್ಲಿ 00 ಮನೆ ವಿಳಾಸ ಇರುವ ಸಂಖ್ಯೆಯ ಹಲವು ಮತದಾರರು ಇದ್ದಾರೆ. ಮಾನ್ವಿಯಲ್ಲಿ ಪಾರ್ಟ್ 6ರಲ್ಲಿ, ಮಸ್ಕಿಯ ಪಾರ್ಟ್ ಸಂಖ್ಯೆ 1ರಲ್ಲಿ ಇದೇ ರೀತಿ ಇದೆ. ಹಾಗಿದ್ದರೆ ಇದು ಮತ ಕಳ್ಳತನ ಅಲ್ಲವೇ? ರಾಹುಲ್ ಗಾಂಧಿ ಸ್ವಲ್ಪ ಇಲ್ಲೂ ‘ಗ್ರೌಂಡ್ ವರ್ಕ್’ ಮಾಡಿ ಹೇಳಬೇಕಿತ್ತು’ ಎಂದು ಹೇಳಿದರು.
ಬಿಟಿಎಂ ಲೇಔಟ್‌ನಲ್ಲಿ ಬಲ್ಕ್ ಮತದಾರರು ಇರುವ ಕೆಲವು ಕೊಠಡಿಗಳ ವಿಳಾಸ ನೀಡಿ, ಅದರ ದಾಖಲೆಗಳನ್ನೂ ಪ್ರದರ್ಶಿಸಿದ ಲಿಂಬಾವಳಿ, ‘ಚಾಮರಾಜಪೇಟೆ, ಶಿವಾಜಿನಗರದಲ್ಲೂ ಡಬಲ್ ಎಂಟ್ರಿ ಆಗಿದೆ. ಆಯಿಷಾ ಬಾನು ಎಂಬುವರ ಹೆಸರು ಚಾಮರಾಜಪೇಟೆಯಲ್ಲಿ ಪಾರ್ಟ್ ಸಂಖ್ಯೆ 45 ಮತ್ತು 47ರಲ್ಲಿ ಎರಡು ಕಡೆಗಳಲ್ಲಿದೆ. ಶಿವಾಜಿನಗರದ ಪಾರ್ಟ್ ನಂಬರ್ 169, ಪಾರ್ಟ್ ನಂಬರ್ 11ರಲ್ಲಿ ರಹಮತ್ ಉಲ್ಲಾ ಎಂಬುವರ ಹೆಸರಿದೆ’ ಎಂದು ಕ್ರಮಾಂಕದ ಜೊತೆಗೆ ಲಿಂಬಾವಳಿ ವಿವರಿಸಿದರು.
ರಾಹುಲ್‌ಗೆ ಏಕೆ ಅಸಮಾಧಾನ?:
‘ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿಯ ಮತ ಗಳಿಕೆ ನಿರಂತರವಾಗಿ ಏರುಗತಿಯಲ್ಲಿದೆ. ಇದಕ್ಕೆ ರಾಹುಲ್‌ಗೆ ಅಸಮಾಧಾನ ಏಕೆ ಎಂಬುದು ಅರ್ಥ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನ ವಲಸಿಗರು ವಾಸವಿರುವ ಮತ್ತು ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಕ್ಷೇತ್ರ ನಮ್ಮದು’ ಎಂದರು.
‘ಮಹದೇವಪುರದಲ್ಲಿ ಚುನಾವಣಾ ಅಕ್ರಮಗಳು ನಡೆದಿಲ್ಲ. ನಮ್ಮ ಪಕ್ಷಕ್ಕೆ ಅಲ್ಲಿ ಸಹಜವಾದ ಬೆಳವಣಿಗೆ ಇದೆ. ಇಷ್ಟು ದಿನ ಇವಿಎಂ ಬೈಯ್ಯುತ್ತಿದ್ದರು. ಈಗ ಮತದಾರರ ಪಟ್ಟಿ ಹಿಡಿದುಕೊಂಡಿದ್ದಾರೆ’ ಎಂದು ಟೀಕಿಸಿದರು.
ಮತದಾರರ ಪಟ್ಟಿ ತಯಾರಿಕೆಯಲ್ಲಿ ಪ್ರಧಾನಿ ಅಥವಾ ಬಿಜೆಪಿ ನಾಯಕರ ಪಾತ್ರ ಇರುತ್ತದೆಯೇ? ರಾಜ್ಯ ಸರ್ಕಾರದ ಅಧಿಕಾರಿಗಳೇ ಪಟ್ಟಿ ತಯಾರಿಸುತ್ತಾರೆ. ರಾಹುಲ್ ಅವರದು ಠುಸ್ ಪಟಾಕಿಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ದೇಶದ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಬಹುಶಃ ಒಬ್ಬ ಹುಡುಗಾಟದ ಹುಡುಗ. ಹೀಗೆ ಹುಡುಗಾಟ ಆಡುತ್ತಿದ್ದರೆ ಜನರು ನಿಮ್ಮನ್ನವಾಮಿ ವಿರೋಧ ಪಕ್ಷದ ನಾಯಕ ವಿಧಾನಪರಿಷತ್ತುು ಪ್ರಬುದ್ಧ ನಾಯಕ ಎಂದು ಕರೆಯುವುದಿಲ್ಲ ಛಲವಾದಿ ನಾರಾಯಣಸ್
ನಾಲ್ಕೂ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ ಇತ್ತು
‘2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿತ್ತು ಎಂದು ರಾಹುಲ್ ಗಾಂಧಿ ಸುಳ್ಳು ಮಾಹಿತಿ ನೀಡಿದ್ದಾರೆ. ವಾಸ್ತವದಲ್ಲಿ ರಾಜಾಜಿನಗರ ಗಾಂಧಿನಗರ ಸಿ.ವಿ.ರಾಮನ್ ನಗರ ಮತ್ತು ಮಹದೇವಪುರ ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿತ್ತು. ಈ ನಾಲ್ಕೂ ಕ್ಷೇತ್ರಗಳಿಂದ 32707 ಮತಗಳ ಅಂತರದಿಂದ ಗೆದ್ದಿದ್ದೇವೆ’ ಎಂದು ಅರವಿಂದ ಲಿಂಬಾವಳಿ ಹೇಳಿದರು. ‘2019ರ ಚುನಾವಣೆಯಲ್ಲಿ ಪಿ.ಸಿ.ಮೋಹನ್ 69974 ಮತಗಳ ಅಂತರದಿಂದ ಗೆದ್ದಿದ್ದರು. ಆಗ ಮಹದೇವಪುರದಲ್ಲಿ 72559 ಮತಗಳ ಮುನ್ನಡೆ ಕೊಟ್ಟಿದ್ದೆವು. ಈ ಬಾರಿ 114046 ಮತಗಳ ಮುನ್ನಡೆ ಕೊಟ್ಟಿದ್ದೆವು. ಮಹದೇವಪುರ ಬಿಜೆಪಿಯ ಭದ್ರಕೋಟೆ’ ಎಂದು ಅವರು ತಿಳಿಸಿದರು.
ಮೂರ್ಖರಂತೆ ಮಾತಾಡುತ್ತಿರುವ ಕಾಂಗ್ರೆಸಿಗರು: ವಿಜಯೇಂದ್ರ ‘ರಾಹುಲ್ ಗಾಂಧಿ ಹೇಳಿಕೆಯ ನಂತರ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್‌ನ ಹಿರಿಯ ನಾಯಕರು ಮೂರ್ಖರಂತೆ ಮಾತನಾಡುತ್ತಿದ್ದಾರೆ. ಲೋಕಸಭೆಯ ವಿಸರ್ಜನೆಗೆ ಒತ್ತಾಯಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಯಾವ ಸಮೀಕ್ಷೆಗಳೂ ಆ ರೀತಿ ಹೇಳಿಲ್ಲ.
ಯಾರೋ ಮೂರ್ಖರು 16 ಸ್ಥಾನಗಳು ಗೆಲ್ಲಲಿವೆ ಎಂದು ರಾಹುಲ್ ಗಾಂಧಿಗೆ ಹೇಳಿರಬಹುದು’ ಎಂದು ವ್ಯಂಗ್ಯವಾಡಿದರು. ‘2019ರಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. 2024ರಲ್ಲಿ ಕಡಿಮೆ ಆಗಿದೆ. ಹಾಗಿದ್ದರೆ ಅಕ್ರಮ ಆಗಿದೆ ಎಂದು ಬಿಜೆಪಿ ಹೇಳಬೇಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.